ನವದೆಹಲಿ: ಕಂಪನಿಗಳು ನೀಡಿದ ಭರವಸೆಯಂತೆ, ಜಾಹೀರಾತುಗಳಲ್ಲಿ ಹೇಳಿದಂತೆ ಉತ್ಪನ್ನಗಳು ಇರದಿರುವುದಕ್ಕೆ ಕೆಲವರು ಕೇಸು ಹಾಕಿದ ಉದಾಹರಣೆಗಳಿವೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ರೆಡಿ ಆಗಿಲ್ಲವೆಂದು ಆ ಕಂಪನಿ ವಿರುದ್ಧ ಕೇಸು ದಾಖಲಿಸಿದ್ದಾಳೆ.
ಅಮೆರಿಕದ ಕ್ರಾಫ್ಟ್ ಹೀಂಜ್ ಕಂಪನಿಯ ವಿರುದ್ಧ ಫ್ಲೋರಿಡದ ಯುವತಿ ಅಮಾಂಡಾ ರಮಿರೆಜ್ ಹೀಗೊಂದು ಕೇಸ್ ದಾಖಲಿಸಿರುವುದು ಗಮನ ಸೆಳೆದಿದೆ. ಕಂಪನಿ ಹೇಳಿರುವಂತೆ ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗುತ್ತಿಲ್ಲ ಎಂದು ಆಕೆ 5 ಮಿಲಿಯನ್ ಡಾಲರ್ (40 ಕೋಟಿ ರೂ.ಗೂ ಅಧಿಕ) ಮೊತ್ತದ ಕೇಸು ದಾಖಲಿಸಿದ್ದಾಳೆ.
ಕ್ರಾಫ್ಟ್ ಹೀಂಜ್ ಕಂಪನಿ ತಿಳಿಸಿದಂತೆ ವೆಲ್ವೀಟಾ ಪಾಸ್ತಾ ಮೂರೂವರೆ ನಿಮಿಷದಲ್ಲಿ ಸಿದ್ಧವಾಗುತ್ತಿಲ್ಲ, ಇದು ಫೆಡರಲ್ ಕಾನೂನು ಉಲ್ಲಂಘನೆ ಎಂದು ಯುವತಿ ನ. 18ರಂದು ಕೋರ್ಟ್ ಮೆಟ್ಟಿಲೇರಿದ್ದಾಳೆ. ಪ್ಯಾಕೆಟ್ನಲ್ಲಿ ನಮೂದಿಸಿರುವ ರೀತಿಯಲ್ಲೇ ತಯಾರಿಸಿದರೂ ಮೂರೂವರೆ ನಿಮಿಷದಲ್ಲಿ ಅದು ತಯಾರಾಗುತ್ತಿಲ್ಲ ಎಂದು ಈಕೆ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಫಾರ್ ದ ಸದರ್ನ್ ಡಿಸ್ಟ್ರಿಕ್ಟ್ ಆಫ್ ಫ್ಲೋರಿಡದಲ್ಲಿ ಕೇಸು ದಾಖಲಿಸಿದ್ದಾಳೆ.
2022ರ ಅಕ್ಟೋಬರ್-ನವೆಂಬರ್ ಮಧ್ಯದಲ್ಲಿ 10.99 ಡಾಲರ್ ಬೆಲೆಯ ಪಾಸ್ತಾ ಖರೀದಿಸಿದ್ದು, ನಷ್ಟದ ರೂಪದಲ್ಲಿ ನನಗೆ 5 ಮಿಲಿಯನ್ ಡಾಲರ್ ಕೊಡಬೇಕಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಇದೊಂದು ಕ್ಷುಲ್ಲಕ ಮೊಕದ್ದಮೆಯಾಗಿದ್ದು, ಇದನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಕಂಪನಿ ಹೇಳಿದೆ. -ಏಜೆನ್ಸೀಸ್