ನ್ಯೂಸ್

ನನ್ನ ಹಣ ವಾಪಸ್​ ಕೊಡು ಎಂದಿದ್ದಕ್ಕೆ ಮಹಿಳೆಗೆ ಬೆಂಕಿ ಹಚ್ಚಿದ ವ್ಯಕ್ತಿ; ಆಘಾತಕಾರಿ ವಿಡಿಯೋ ವೈರಲ್​

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಬಾಕಿ ಮೊತ್ತವನ್ನು ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಮಹಿಳೆಯೊಬ್ಬರಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ.

ಹಣ ಹಿಂತಿರುಗಿಸುವ ವಿಚಾರವಾಗಿ ತನ್ನನ್ನು ಕೊಲೆ ಮಾಡಲು ಅಂಗಡಿಯವ ಮುಂದಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಗಾಯಾಳು ದೀಪಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆ ಬಳಿಕ ಆರೋಪಿ ತಲೆಮಾರಿಸಿಕೊಂಡಿದ್ದು, ಪೊಲೀಸರು ಆತನನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಕೊತ್ವಾಲಿ ನಗರದ ಕಾಕನ್​ ಗ್ರಾಮದ ನಿವಾಸಿಯಾದ ದೀಪಾ ಅದೇ ಊರಿನಲ್ಲಿ ಮೊಬೈಲ್​ ಅಂಗಡಿ ನಡೆಸುತ್ತಿದ್ದ ವ್ಯಕ್ತಿಗೆ 80 ಸಾವಿರ ರೂಪಾಯಿ ಸಾಲ ಕೊಟ್ಟಿದ್ದರು. ಶನಿವಾರ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಸಂತ್ರಸ್ತೆ ದೀಪಾ ತನ ಹಣವನ್ನು ಹಿಂತಿರುಗಿಸುವಂತೆ ಅಂಗಡಿಯವನಿಗೆ ತಾಕೀತು ಮಾಡಿದ್ದಾರೆ.

ಇದರಿಂದ ಕುಪಿತಗೊಂಡ ಆರೋಪಿಯು ಏಕಾಏಕಿ ಆಕೆಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದು, ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಘಟನೆ ಬಳಿಕ ಆರೋಪಿ ತಲೆಮಾರಿಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.