ನ್ಯೂಸ್

ಬಾಯ್​ ಫ್ರೆಂಡ್​ಗೆ ಆಕೆ ಕೊಟ್ಟದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 1,000 ಕಿಲೋ ಈರುಳ್ಳಿ ಗಿಫ್ಟ್​ ! ಯಾಕೆ?

ಬೀಜಿಂಗ್​: ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಿದರೆ, ಚೀನಾದಲ್ಲಿ ಅಂಥದ್ದೇ ವಿಶೇಷ ದಿನದ ಆಚರಣೆ ಮೇ 20ರಂದು ಚಾಲ್ತಿಯಲ್ಲಿದೆ. ಈ ದಿನದ ವಿಶೇಷ ಎಂದರೆ ಜಗತ್ತಿನ ಗಮನ ಸೆಳೆದಿದ್ದಾಳೆ ಒಬ್ಬಳು ಪ್ರೇಮಿ. ಬಾಯ್​ ಫ್ರೆಂಡ್​ಗೆ ಆಕೆ ಕಳುಹಿಸಿದ್ದು ಬರೋಬ್ಬರಿ 1,000 ಕಿಲೋ ಈರುಳ್ಳಿ...! ಒಂದೆರಡು ಕಿಲೋ ಅಲ್ಲ, ಸಾವಿರ ಕಿಲೋ ಈರುಳ್ಳಿ! ಅದೇನೂ ಆಕೆ ಖುಷಿಯಿಂದ ಕಳುಹಿಸಿದ್ದಲ್ಲ. ಅದರಲ್ಲೊಂದು ಗುಪ್ತ ಸಂದೇಶವಿದೆಯಂತೆ!

ಬಾಯ್​ಫ್ರೆಂಡ್ ಮನೆಯ ಬೀದಿಯಲ್ಲಿ ಲಾರಿಯೊಂದು ಬಂದು ನಿಂತಾಗ ಎಲ್ಲರ ಗಮನವೂ ಅದರತ್ತ ಹರಿದಿತ್ತು. ಲಾರಿ ತುಂಬಾ ಈರುಳ್ಳಿ.. ಮನೆಗಳ ಬೀದಿಗೆ ಇದೇಕೆ ಬಂತು ಎಂಬ ಕುತೂಹಲದಿಂದ ಎಲ್ಲರೂ ಕಣ್ಣು ಬಾಯಿ ಬಿಟ್ಟು ನೋಡುತ್ತ ನಿಂತಿದ್ದರು. ಲಾರಿಯಿಂದ ಇಳಿದ ವ್ಯಕ್ತಿ, ಈರುಳ್ಳಿ ಡೋರ್ ಡೆಲಿವರಿ ನೀಡುವುದಕ್ಕಾಗಿ ವಿಳಾಸ ನೋಡಿ ಅದರಲ್ಲಿದ್ದ ಫೋನ್​ ನಂಬರ್​ಗೆ ಕರೆಮಾಡಿದ.

ಅತ್ತ ಕಡೆಯಿಂದ ಹಲೋ ಎನ್ನುತ್ತಿರುವಂತೆಯೇ, ಸರ್ ನಿಮಗೆ ಈರುಳ್ಳಿ ಡೋರ್​ ಡೆಲಿವರಿ ತಲುಪಿಸಲು ಹೇಳಿದ್ದಾರೆ. 1,000 ಕಿಲೋ ಇದೆ. ಮನೆ ಲೊಕೇಷನ್ ಹೇಳಿ ಎಂದ. ಆತ ಏನು ಎಂದು ಅರ್ಥ ಮಾಡಿಕೊಳ್ಳದೇ ವಿಳಾಸ ಹೇಳಿದ. ಮನೆಯ ಬಾಗಿಲು ಕೂಡ ತೆರೆಯಲಾಗದಂತೆ ಈರುಳ್ಳಿ ಚೀಲಗಳು ಅನ್​ಲೋಡ್ ಆಗಿಬಿಟ್ಟವು! ಈರುಳ್ಳಿ ಕಳುಹಿಸಿದ್ದು ಯಾರು ಎಂದು ಆತ ನೋಡಿದ. ಹೆಸರು ನೋಡಿ ತನ್ನ ಪ್ರೇಯಸಿ ಎಂದು ಗೊತ್ತಾಗುತ್ತಲೇ ನಿಟ್ಟುಸಿರು ಬಿಟ್ಟ!!! ಅದರಲ್ಲೊಂದು ಚೀಟಿ ಇತ್ತು- "ಮೂರು ದಿನ ನಾನು ಕಣ್ಣೀರು ಹಾಕುವಂತೆ ಮಾಡಿದೆ, ಈಗ ನಿನ್ನ ಸರದಿ!" ಎಂಬ ಸಾಲುಗಳಿದ್ದವು ಅಲ್ಲಿ..

ಹಿನ್ನೆಲೆ ಇದು: ಈರುಳ್ಳಿ ಕಳುಹಿಸಿದ ಪ್ರೇಯಸಿ ಶಾನ್​ಡಾಂಗ್ ಪ್ರಾಂತ್ಯದ ಜಿಬೋ ಎಂಬಲ್ಲಿನ ಝಾವೋ. ಕೆಲವು ದಿನಗಳ ಹಿಂದೆ ಅಚಾನಕ್ ಆಗಿ ಬಾಯ್​ ಫ್ರೆಂಡ್​ನ ಫೋನ್​ ಆಕೆಯ ಕೈಗೆ ಸಿಕ್ಕಿತ್ತು. ನೋಡಿದರೆ, ಆಕೆಯ ಜತೆಗೆ ಮಾತ್ರವಲ್ಲದೇ ಬೇರೆ ಅನೇಕ ಹುಡುಗಿಯ ಜತೆಗೂ ಆತ ಲಲ್ಲೆಗೆರೆಯುವ ಸಂದೇಶಗಳನ್ನು, ಫೋಟೊಗಳನ್ನು, ವಿಡಿಯೋಗಳನ್ನು ಕಳುಹಿಸಿದ್ದು ಕಂಡುಬಂದಿತ್ತು. ಅದನ್ನು ನೋಡಿದ ಆಕೆಗೆ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ಮೂರು ದಿನ ಸಾಕಷ್ಟು ಕಣ್ಣೀರು ಹಾಕಿ ಪಶ್ಚಾತಾಪ ಪಟ್ಟಳು. ಸೇಡು ಬಲಿಯಿತು. ಪ್ರತೀಕಾರಕ್ಕೆ ಮನ ಹಾತೊರೆಯಿತು.

ಆತ ನನ್ನಂತೆ ಕಣ್ಣೀರು ಹಾಕಲಾರ. ಏನು ಮಾಡುವುದು ಎಂದು ಚಿಂತಿಸುತ್ತಿದ್ದಾಕೆಗೆ ಹೊಳೆಯಿತೊಂದು ಉಪಾಯ. ಈರುಳ್ಳಿ ಕಣ್ಣೀರಿಗೆ ಫೇಮಸ್​. ಅದರದ್ದೇ ಪ್ರಯೋಗ ಯಾಕಾಗಬಾರದು ಎಂದು ಯೋಚಿಸಿ ಕಾರ್ಯಗತ ಮಾಡಿಯೇ ಬಿಟ್ಟಳು. ಈರುಳ್ಳಿ ಘಾಟಿಗಾದರೂ ಆತ ಕಣ್ಣೀರು ಹಾಕಲಿ ಎಂಬುದು ಆಕೆಯ ಉದ್ದೇಶವಾಗಿತ್ತು.

ಆತನ ಮನೆಯ ಸುತ್ತಮುತ್ತ ಎಲ್ಲ ಈಗ ಈರುಳ್ಳಿಯದ್ದೇ ಘಾಟು. ಆತ ಅತ್ತನೋ ಬಿಟ್ಟನೋ ಗೊತ್ತಿಲ್ಲ ಎಂದು ಅದೇ ಬೀದಿಯವರೊಬ್ಬರು ಹೇಳಿದ್ದಾಗಿ ಚೀನಾದ ಮಾಧ್ಯಮವೊಂದು ವರದಿಮಾಡಿದೆ. ಸೇಡಿನಲ್ಲೂ ಇನ್ನೋವೇಟಿವ್ ಐಡಿಯಾ ಎಂದು ಅನೇಕ ಪ್ರೇಮಿಗಳು ಹುಬ್ಬೇರಿಸುತ್ತಿದ್ದಾರಂತೆ! (ಏಜೆನ್ಸೀಸ್​)