ಪುಣೆ: ಕಳ್ಳರು ಹೇಗೆಲ್ಲಾ ಕೈಚಳಕ ತೋರಿದರೂ ಒಂದಲ್ಲ ಒಂದು ಸುಳಿವು ಬಿಟ್ಟಿರುತ್ತಾರೆ ಎನ್ನುವುದು ತೀರಾ ಹಳೆಯ ನಾಣ್ಣುಡಿ. ಅಂಥದ್ದೇ ಕಳುವಿನ ಪ್ರಕರಣ ಪುಣೆಯಲ್ಲಿ ನಡೆದಿದೆ. ಆದರೆ ಇದು ಬೇರೆಲ್ಲಾ ಘಟನೆಗಳಿಂತ ಭಿನ್ನವಾಗಿದ್ದು, ಕಳ್ಳನ ಬಗ್ಗೆ ತಿಳಿದಾಗ ಪತಿ ಹೌಹಾರಿ ಹೋದ ಘಟನೆಯೂ ನಡೆದಿದೆ!
ಇಲ್ಲಿಯ ಬಿಬ್ವೆವಾಡಿಯಲ್ಲಿ ಅಕ್ಷಯ್ ದಿಲೀಪ್ ಭಂಡಾರಿ ಮತ್ತು ಮೃಣಾಲ್ ದಂಪತಿ ವಾಸವಾಗಿದ್ದಾರೆ. ಇವರ ಜತೆ, ಸೋದರ ಸಂಬಂಧಿಗಳೂ ವಾಸವಾಗಿದ್ದಾರೆ. ಮಸಾಲೆ ಕಾರ್ಖಾನೆಯೊಂದಿಗೆ ಮಸಾಲೆ ವ್ಯಾಪಾರ ಮಾಡುತ್ತಿರುವ ಅಕ್ಷಯ್, ದಿನವೂ ದುಡಿದ ಹಣವನ್ನು ಒಂದು ಕಪಾಟಿನಲ್ಲಿ ಇಡುತ್ತಿದ್ದರು. ಇದರ ಜತೆಗೆ, ಅಕ್ಷಯ್ ಮೃಣಾಲ್ ಅವರಿಗೆ ಮಾಡಿಸಿಕೊಟ್ಟಿದ್ದ ಚಿನ್ನದ ಒಡವೆಗಳೂ ಅಲ್ಲಿ ಇದ್ದವು.
ಅದೊಂದು ದಿನ ಅಕ್ಷಯ್ ಕಪಾಟನ್ನು ತೆರೆದು ನೋಡಿದಾಗ, ಅಲ್ಲಿ ಒಂದಿಷ್ಟು ಹಣ ಹಾಗೂ ಒಡವೆಗಳು ನಾಪತ್ತೆಯಾಗಿರುವಂತೆ ಕಂಡಿತು. ಆ ಬಗ್ಗೆ ಪತ್ನಿಯಲ್ಲಿ ಕೇಳಿದಾಗ ಆಕೆ ಹಣವನ್ನು ಎಣಿಸಿ, ಕಳ್ಳತನ ಆಗಿರುವ ಸಾಧ್ಯತೆ ಇಲ್ಲ ಎಂದಳು. ಚಿನ್ನದ ಒಡವೆಗಳು ಕೂಡ ಹಾಗೆಯೇ ಇರುವುದಾಗಿ ಹೇಳಿದಳು. ಮೇಲಿಂದ ಮೇಲೆ ಹಣ ಕಳ್ಳತನ ಆಗುತ್ತಿರುವ ಗುಮಾನಿ ಬಂದರೂ, ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಅಕ್ಷಯ್. ಜತೆಗೆ, ಆ ಕಪಾಟಿನ ಸಂಪೂರ್ಣ ಜವಾಬ್ದಾರಿಯನ್ನು ಮನೆಯಲ್ಲಿಯೇ ಇರುವ ಪತ್ನಿಯ ಕೈಗೆ ಒಪ್ಪಿಸಿರುವ ಕಾರಣ, ಆಕೆ ಅದನ್ನು ನೋಡಿಕೊಳ್ಳುವ ಭರವಸೆ ಅಕ್ಷಯ್ಗೆ ಇತ್ತು.
ಇದನ್ನೂ ಓದಿ: ಕೌಟುಂಬಿಕ ಕಲಹದಿಂದ ದಂಪತಿ ಆತ್ಮಹತ್ಯೆ
ಹೀಗೇ ವರ್ಷ ಕಳೆಯಿತು. ಅದೊಂದು ದಿನ ಅಕ್ಷಯ್, ಕಚೇರಿಗೆ ಹೋದಾಗ ಗಾಬರಿಯಿಂದ ಕರೆ ಮಾಡಿದ ಮೃಣಾಲ್, ಮನೆಯಲ್ಲಿ ಇರುವ ಹಣ ಹಾಗೂ ಒಡವೆಗಳೆಲ್ಲವೂ ಕಾಣೆಯಾಗಿದೆ ಎಂದು ಏದುಸಿರುಬಿಡುತ್ತಾ ಹೇಳಿದಳು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳುವು ಆಗಿದೆ ಎಂದು ಆಕೆ ಹೇಳಿದಳು. ಇದರಿಂದ ಗಾಬರಿಗೊಂಡ ಅಕ್ಷಯ್ ಮನೆಗೆ ಬಂದು ನೋಡಿದಾಗ ಕಪಾಟಿನಲ್ಲಿರುವ ಸುಮಾರು 1.68 ಕೋಟಿ ರೂ. ನಗದು ಮತ್ತು 6.40 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ತಿಳಿಯಿತು.
ಪೊಲೀಸರಲ್ಲಿ ಅಕ್ಷಯ್ ದೂರು ದಾಖಲು ಮಾಡಿದರು. ತನಿಖೆ ಕೈಗೊಂಡ ಪೊಲೀಸರಿಗೆ ಮನೆಯಲ್ಲಿ ಯಾರೂ ಬಲವಂತವಾಗಿ ಮನೆಯೊಳಕ್ಕೆ ನುಸುಳದ ಕಾರಣ, ಮನೆಯಲ್ಲಿ ಇರುವವರದ್ದೇ ಇದು ಕೈವಾಡ ಇರಬೇಕು ಎಂದು ಅನ್ನಿಸಿತು. ಆದರೆ ಕಳುವಾಗಿರುವ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂಬುದೂ ಸತ್ಯವಾಗಿದ್ದರಿಂದ ಪೊಲೀಸರಿಗೆ ಇದೊಂದು ಸವಾಲೇ ಆಯಿತು.
ನಂತರ ಪೊಲೀಸರು ಸಿಸಿಟಿಯನ್ನು ಪರಿಶೀಲಿಸಿದರು. ಸಿಸಿಟಿವಿ ನೋಡಿದಾಗ ಅದು ದಿಕ್ಕು ತಪ್ಪಿಸಿ ಇಡಲಾಗಿತ್ತು. ಆಗ ಪೊಲೀಸರಿಗೆ ಇದು ಮನೆಯವರದ್ದೇ ಕಿತಾಪತಿ ಎಂದು ತಿಳಿಯಿತು. ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸಿಸಿಟಿಯನ್ನು ತಿರುಗಿಸುತ್ತಿರುವ ಸಮಯದಲ್ಲಿ ಅದರಲ್ಲಿ ಕೈ ಕಾಣಿಸಿತು. ಇದು ಯಾರ ಕೈ ಎಂದು ಅಕ್ಷಯ್ ಅವರನ್ನು ಪೊಲೀಸರು ಕೇಳಿದಾಗ, ಅದನ್ನು ನೋಡಿದ ಅಕ್ಷಯ್ ಹೌಹಾರಿ ಹೋದರು. ಏಕೆಂದರೆ ಅದು ಅವರದ್ದೇ ಹೆಂಡತಿಯ ಕೈಯಾಗಿತ್ತು.
ಇದನ್ನೂ ಓದಿ: ಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್ ಅಪ್ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್ ಪ್ರೇಯಸಿಗೆ ಹೀಗಾ ಮಾಡೋದು?
ನಂತರ ಹೆಂಡತಿಯನ್ನು ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಿಸಿದಾಗ ಮೃಣಾಲ್ ತನ್ನ ತಪ್ಪನ್ನು ಒಪ್ಪಿಕೊಂಡಳು!
ಈಕೆಗೆ ಅನಿಕೇತ್ ಎನ್ನುವವನ ಸ್ನೇಹಿತ ಇದ್ದಾನೆ. ಇವರಿಬ್ಬರೂ 2013ರಿಂದಲೇ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಪಾಲಕರ ವಿರೋಧವಿದ್ದುದರಿಮದ 2016ರಲ್ಲಿ ಅಕ್ಷಯ್ ಜತೆ ಮದುವೆಯಾಯಿತು. ಆದರೆ ಹಳೆಯ ಪ್ರೇಮಿಯ ಜತೆ ಗುಟ್ಟುಗುಟ್ಟಾಗಿ ಭೇಟಿಯಾಗುತ್ತಿದ್ದಳು.
ಈ ಹಿನ್ನೆಲೆಯಲ್ಲಿ ವರ್ಷದ ಹಿಂದೆಯೇ ಇಬ್ಬರೂ ವಿದೇಶಕ್ಕೆ ಓಡಿಹೋಗುವ ಯೋಜನೆ ರೂಪಿಸಿದ್ದರು. ಹಣದ ಅವಶ್ಯಕತೆ ಇದ್ದುದರಿಂದ ವರ್ಷದಿಂದಲೂ ಮೃಣಾಲ್ ಸ್ವಲ್ಪ ಸ್ವಲ್ಪವೇ ದುಡ್ಡು ಮತ್ತು ಚಿನ್ನವನ್ನು ಆತನಿಗೆ ರವಾನಿಸುತ್ತಿದ್ದಳು. ಕಳುವಾದ ದಿನ ಯಾರೂ ಮನೆಯಲ್ಲಿ ಇಲ್ಲದಾಗ ತನ್ನ ಪ್ರೇಮಿಗೆ ಹೆಂಡತಿ ಮನೆಯ ಕೀಲಿ ಕೊಟ್ಟಿದ್ದಳು. ಆತ ಬಂದು ಎಲ್ಲವನ್ನೂ ದೋಚಿ ಹೋಗಿದ್ದ. ಈ ಬಗ್ಗೆ ಕೇಳುತ್ತಿದ್ದಂತೆಯೇ ಅಕ್ಷಯ್ ಅವರು ಬೆವರಿ ಹೋದರು.
ಪ್ರೇಮಿ ಅನಿಕೇತ್ ಅವನ ಜಾತಕ ಕೆದಕಿಯಾಗ ಆತ ಇನ್ನೂ ಅನೇಕ ಕಳುವು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ. ಮೃಣಾಲ್ ಕೊಟ್ಟಿರುವ ಚಿನ್ನ, ಹಣವನ್ನೂ ತೆಗೆದುಕೊಂಡು ಆತ ಪರಾರಿಯಾಗಿದ್ದಾನೆ. ಸದ್ಯ ಪತ್ನಿಯನ್ನು ಬಂಧಿಸಿರುವ ಪೊಲೀಸರು ಆಕೆಯ ಪ್ರೇಮಿಗಾಗಿ ಹುಡುಕಾಟ ನಡೆಸಿದ್ದಾರೆ. (ಏಜೆನ್ಸೀಸ್)