ಒಂದು ಮುದ್ದಾದ ಪೆಂಗ್ವಿನ್ ಪಕ್ಷಿಗೆ ಸಂಬಂಧಪಟ್ಟ ವಿಡಿಯೋ ನೋಡಿದ ನೆಟ್ಟಿಗರು ಸಿಕ್ಕಾಪಟೆ ಖುಷಿಯಾಗಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಅವರು. ಮುದ್ದಾದ ಪೆಂಗ್ವಿನ್ ಮಹಿಳೆಯೋರ್ವರಿಗೆ ಮೌನವಾಗಿಯೇ ಕೃತಜ್ಞತೆ ಸಲ್ಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಮಹಿಳೆಯೋರ್ವರು ಚಿಕ್ಕದಾದ ಪೆಂಗ್ವಿನ್ ಪಕ್ಷಿಯನ್ನು ತಂದು ಸಮುದ್ರದ ಬಳಿ ಬಿಡುತ್ತಾರೆ. ಅವರ ಕೈಯಿಂದ ಸಾಗರದ ಅಲೆಗಳ ಬಲಿ ಕಾಲಿಡುತ್ತಿದ್ದಂತೆ ಪೆಂಗ್ವಿನ್ ಫುಲ್ ಖುಷಿಯಾಗುತ್ತದೆ. ಮಹಿಳೆಯತ್ತ ನೋಡಿ, ತನ್ನ ಮುಂದಿನ ರೆಕ್ಕೆಗಳನ್ನು ಎತ್ತಿ, ಮೌನವಾಗಿಯೇ ಕೃತಜ್ಞತೆ ಸಲ್ಲಿಸುತ್ತದೆ. ಇದನ್ನೂ ಓದಿ: ದೆಹಲಿಯಲ್ಲಿ ಶೀಘ್ರವೇ ಪ್ಲಾಸ್ಮಾ ಬ್ಯಾಂಕ್ ನಿರ್ಮಾಣ: ಮೃತ ವೈದ್ಯನ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ
ಈ ಪುಟ್ಟ ಹಕ್ಕಿಗೆ ಗಾಯವಾಗಿತ್ತು. ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಮಹಿಳೆ ಅದನ್ನು ತಂದು ಸಮುದ್ರದ ಅಂಚಿನಲ್ಲಿ ಬಿಟ್ಟರು. ಪೆಂಗ್ವಿನ್ ಸಮುದ್ರದತ್ತ ಸಾಗಿ ಕಣ್ಮರೆಯಾಗುವುದಕ್ಕೂ ಮೊದಲು ತನ್ನನ್ನು ರಕ್ಷಿಸಿ, ಬಳಿಕ ಇಲ್ಲಿ ಕರೆದುಕೊಂಡು ಬಂದು ಬಿಟ್ಟ ಮಹಿಳೆಗೆ ಪ್ರೀತಿಯಿಂದ ಥ್ಯಾಂಕ್ಸ್ ಹೇಳಿತು ಎಂದು ಸುಸಾಂತಾ ನಂದಾ ಅವರು ಕ್ಯಾಪ್ಷನ್ ಬರೆದಿದ್ದಾರೆ.
ಇದು 30 ಸೆಕೆಂಡ್ಗಳ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಕಣ್ಣಲ್ಲಿ ನೀರು ಬಂತು. ಎಂಥ ಸಭ್ಯ ಜೀವಿ ಎಂದು ನೆಟ್ಟಿಗರೋರ್ವರು ಕಾಮೆಂಟ್ ಬರೆದಿದ್ದಾರೆ. ಇದು ಎರಡು ವರ್ಷ ಹಳೆಯ ವಿಡಿಯೋ. ಮೊದಲ ಬಾರಿಗೆ 2017ರಲ್ಲಿ ಫೇಸ್ಬುಕ್ ಪೇಜ್ವೊಂದರಲ್ಲಿ ಶೇರ್ ಆಗಿತ್ತು. (ಏಜೆನ್ಸೀಸ್)