ನ್ಯೂಸ್

ಪುರುಷ ಸಹೋದ್ಯೋಗಿಯ ಪ್ಯಾಂಟ್​, ಒಳಉಡುಪು ಕೆಳಗೆಳೆದ ಮಹಿಳೆಗೆ ಶಾಕ್​ ಕೊಟ್ಟ ಕೋರ್ಟ್! Colleague ​

Colleague: ನಾವು ಮಾಡುವ ತಮಾಷೆ ಯಾರ ಮನಸ್ಸಿಗೂ ನೋವು ಮಾಡದಂತಿರಬೇಕು. ಅದೇ ಸಮಯದಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರಬಾರದು. ಈಗ್ಯಾಕೆ ಈ ಮಾತು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಸಹೋದ್ಯೋಗಿಗಳ ಮುಂದೆಯೇ ತನ್ನ ಪುರುಷ ಸಹೋದ್ಯೋಗಿಯ ಪ್ಯಾಂಟ್ ಮತ್ತು ಒಳಉಡುಪನ್ನು ಕೆಳಗೆ ಎಳೆಯುವ ಮೂಲಕ ಮಹಿಳೆಯೊಬ್ಬಳು ಅಸಭ್ಯವಾಗಿ ವರ್ತಿಸಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಇದನ್ನು ತಮಾಷೆಗಾಗಿ ಮಾಡಿದ್ದರೂ ಗಂಭೀರತೆ ಅರಿತ ನ್ಯಾಯಾಲಯ, ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಮಹಿಳೆಗೆ ದಂಡ ವಿಧಿಸಿದೆ.

50 ವರ್ಷದ ಮಹಿಳೆಗೆ 2.8 ಮಿಲಿಯನ್ ವೋನ್ ( 1,79,776.80 ರೂಪಾಯಿ ) ದಂಡವನ್ನು ವಿಧಿಸಲಾಯಿತು. ಅಲ್ಲದೆ, ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆಯ ಕುರಿತು ಜಾಗೃತಿ ತರಗತಿಗೆ ಹಾಜರಾಗುವಂತೆ ಮಹಿಳೆಗೆ ಆದೇಶಿಸಲಾಗಿದೆ. ಈ ಘಟನೆ ಕಳೆದ ಅಕ್ಟೋಬರ್‌ನಲ್ಲಿ ಗ್ಯಾಂಗ್ವಾನ್ ಪ್ರಾಂತ್ಯದ ರೆಸ್ಟೋರೆಂಟ್‌ ಒಂದರಲ್ಲಿ ನಡೆದಿತ್ತು. ಅಂದಿನಿಂದ ವಿಚಾರಣೆ ಹಂತದಲ್ಲಿದ್ದ ಪ್ರಕರಣಕ್ಕೆ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದೆ.

ರೆಸ್ಟೋರೆಂಟ್‌ನ ಅಡುಗೆಮನೆಯಲ್ಲಿ 20 ವರ್ಷದ ಯುವಕನೊಂದಿಗೆ ನಾನು ತಮಾಷೆ ಮಾಡುತ್ತಿದ್ದೆ. ಈ ಸಮಯದಲ್ಲಿ ತಮಾಷೆಗಾಗಿ ಪ್ಯಾಂಟ್​ ಎಳೆದೆ ಎಂದು ಮಹಿಳೆ ಸಮಜಾಯಿಷಿ ನೀಡಿದರೂ ನ್ಯಾಯಾಲಯ ಆಕೆಯ ವಾದವನ್ನು ತಿರಸ್ಕರಿಸಿದೆ. ಅಲ್ಲದೆ, ಮಹಿಳೆಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಮತ್ತು ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿದೆ.

ಮಹಿಳೆ ತಾನು ಮಾಡಿದ ತಪ್ಪಿಗೆ ಪ್ರತಿಯಾಗಿ ಸಹೋದ್ಯೋಗಿ ಮತ್ತು ಆತನ ಪಾಲಕರ ಬಳಿ ಕ್ಷಮೆಯಾಚಿಸಲು ಮಂಡಿಯೂರಿ ಕುಳಿತಳು ಎಂದು ನ್ಯಾಯಾಲಯ ಹೇಳಿದ್ದು, ಪ್ರಕರಣ ಇತ್ಯರ್ಥವಾಗಿದೆ ಎಂದು ತಿಳಿಸಿದೆ.

ಅಂದಹಾಗೆ, ಈ ಘಟನೆ ಕುರಿತಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇಷ್ಟು ಸಣ್ಣ ತಪ್ಪಿಗೆ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಬಾರದಿತ್ತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ, ಮತ್ತೊಬ್ಬರು, ದಂಡದ ಮೊತ್ತ ಅತಿಯಾಗಿಲ್ಲ. ನೀವು ಏಕೆ ಹೀಗೆ ಗೇಲಿ ಮಾಡುತ್ತಿದ್ದೀರಿ? ಇದು ತಮಾಷೆಯೇ? ಇದು ತಮಾಷೆ ಎಂದು ನೀವು ಭಾವಿಸುತ್ತೀರಾ? ಇದು ಬೇರೆಯವರ ಖಾಸಗಿತನದ ಮೇಲೆ ಆಕ್ರಮಣವಲ್ಲವೇ? ಎಂದಿದ್ದಾರೆ. ಗೇಲಿಯು ತನ್ನ ಸಭ್ಯತೆಯನ್ನು ಮೀರದಿರಲಿ ಎಂದು ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)