ನವದೆಹಲಿ: ಮಾಧವಿ ಪುರಿ ಬುಚ್ ಅವರನ್ನು ಸೆಕ್ಯುರಿಟೀಸ್ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ನೂತನ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ. ಮಹಿಳೆಯೊಬ್ಬರು ಸೆಬಿ ಮುಖ್ಯಸ್ಥರಾಗಿದ್ದು ಇದೇ ಮೊದಲ ಸಲವಾಗಿದೆ. ಅವರ ಅಧಿಕಾರಾವಧಿ ಮೂರು ವರ್ಷವಾಗಿರುತ್ತದೆ. ಸೆಬಿಯ ಹಾಲಿ ಅಧ್ಯಕ್ಷ ಅಜಯ್ ತ್ಯಾಗಿ ಅವರ ಅಧಿಕಾರಾವಧಿ ಫೆಬ್ರವರಿ 28ರಂದು ಮುಕ್ತಾಯವಾಗಿದ್ದು ಮಾಧವಿ ನೂತನ ಸಾರಥಿಯಾಗಿದ್ದಾರೆ.
ಐಸಿಐಸಿಐ ಸೆಕ್ಯುರಿಟೀಸ್ನ ಮಾಜಿ ಮುಖ್ಯಸ್ಥರಾದ ಮಾಧವಿ, 2017-2021ರ ನಡುವೆ ಸೆಬಿಯ ಪೂರ್ಣಾವಧಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಿಮಾಚಲ ಪ್ರದೇಶ ಕೇಡರ್ನ 1984 ಬ್ಯಾಚ್ನ ಐಎಎಸ್ ಅಧಿಕಾರಿ ತ್ಯಾಗಿ, 2017 ಮಾರ್ಚ್ 1ರಂದು ಸೆಬಿ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದರು. ನಂತರ ಅವರ ಸೇವಾವಧಿಯನ್ನು ಎರಡು ಬಾರಿ ವಿಸ್ತರಿಸಲಾಗಿತ್ತು.
2021ರ ಅಕ್ಟೋಬರ್ನಲ್ಲಿ ಸೆಬಿ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸಂಪುಟ ಕಾರ್ಯದರ್ಶಿ ನೇತೃತ್ವದ ಫೈನಾನ್ಶಿಯಲ್ ಸೆಕ್ಟರ್ ರೆಗ್ಯುಲೇಟರಿ ಅಪಾೖಂಟ್ಮೆಂಟ್ಸ್ ಕಮಿಟಿ (ಎಫ್ಎಸ್ಆರ್ಎಎಸ್ಸಿ) ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿತ್ತು.
ವೈವಿಧ್ಯ ಸೇವೆ: ಮಾರುಕಟ್ಟೆ ನಿಯಂತ್ರಣ ಸಂಸ್ಥೆಯ ನೂತನ ತಂತ್ರಜ್ಞಾನ ಸಮಿತಿಯ ಮುಖ್ಯಸ್ಥರಾಗಿಯೂ ಮಾಧವಿ ಕಾರ್ಯ ನಿರ್ವಹಿಸಿದ್ದಾರೆ. ಐಸಿಐಸಿಐ ಬ್ಯಾಂಕ್ನಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಮಾಧವಿ, ಅದರ ಆಡಳಿತ ನಿರ್ದೇಶಕಿ ಹುದ್ದೆಗೆ ಏರಿದ್ದರು. ಐಸಿಐಸಿಐ ಸೆಕ್ಯುರಿಟೀಸ್ನ ಸಿಇಒ ಕೂಡ ಆಗಿದ್ದರು. ಗ್ರೇಟರ್ ಪೆಸಿಫಿಕ್ ಕ್ಯಾಫಿಟಲ್ ಎಲ್ಎಲ್ಪಿ ಸೇರಲು 2011ರಲ್ಲಿ ಸಿಂಗಾಪುರಕ್ಕೆ ತೆರಳಿದ್ದರು. ಷಾಂಘಾಯ್ನ ನ್ಯೂ ಡೆವಲಪ್ವೆುಂಟ್ ಬ್ಯಾಂಕ್ನಲ್ಲಿಯೂ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.