ನ್ಯೂಸ್

ನಿರುದ್ಯೋಗಿ ಆದ್ರೂ ಪರವಾಗಿಲ್ಲ! ಫಿಕ್ಸ್​ ಆಗಿದ್ದ ಮದುವೆ ಮುರಿದು ಪ್ರೇಮಿಗೆ 'ಕರಿಮಣಿ ಮಾಲೀಕ' ನೀನೆ ಎಂದಳು ಈ ಯುವತಿ

ಬಿಹಾರ: ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಈ ಹಿಂದೆ ನಮ್ಮ ಹುಡುಗಿಗೆ ಒಬ್ಬ ಒಳ್ಳೆ ಹುಡುಗ ಸಿಕ್ಕರೆ ಸಾಕಪ್ಪ ಎನ್ನುತ್ತಿದ್ದರು ಪೋಷಕರು. ಆದರೆ ಆ ವಿಷಯದಲ್ಲಿ ಇದೀಗ ಕೊಂಚ ಬದಲಾವಣೆ ಉಂಟಾಗಿದ್ದು, ನಮ್ಮ ಹುಡುಗನಿಗೆ ಒಳ್ಳೆಯ ವಧು ಅನ್ನೋದಕ್ಕಿಂತ ಒಂದು ಹುಡುಗಿ ಜೋಡಿಯಾದರೆ ಸಾಕು ಬೇರೇನೂ ಬೇಕಿಲ್ಲ ಎಂದು ತಂದೆ-ತಾಯಂದಿರು ಚಿಂತಿಸುತ್ತಿದ್ದಾರೆ. ಅದರಲ್ಲೂ ಅತೀ ಮುಖ್ಯವಾಗಿ ಹುಡುಗ ಒಂದೊಳ್ಳೆ ಕೆಲಸದಲ್ಲಿ ಇರಬೇಕು ಎಂಬುದು ಹೆಣ್ಣು ಹೆತ್ತವರ ಮೊದಲ ಆಸೆ. ಆದರೆ.....

ಆ ಆಸೆ ಈಡೇರದೆ ಹೋದರೂ ಸಹ ಕನಿಷ್ಠ ಉದ್ಯೋಗದಲ್ಲಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಕೆಲಸ ಮಾಡುತ್ತಿದ್ದಾರೆ ಓಕೆ ತೊಂದರೆಯಿಲ್ಲ, ಹುಡುಗ ಒಳ್ಳೆಯವನ್ನೇ ನಮ್ಮ ಮಗಳನ್ನು ನೋಡಿಕೊಳ್ಳುತ್ತಾನೆ ಎಂದೆಲ್ಲಾ ಪೋಷಕರು ಲೆಕ್ಕಾಚಾರ ಹಾಕಿಕೊಳ್ಳುತ್ತಾರೆ. ಆದರೆ, ಉದ್ಯೋಗವಿಲ್ಲದೇ ಸದ್ಯಕ್ಕೆ ಖಾಲಿ ಕೂತ್ತಿದ್ದಾರೆ ಅಂದರೂ, ಖಂಡಿತವಾಗಿ ಯಾರು ತಮ್ಮ ಮಗಳನ್ನು ಧಾರೆ ಎರೆದು ಕೊಡಲು ಮುಂದೆ ಬರುವುದಿರಲಿ, ಅವರತ್ತ ತಿರುಗಿಯೂ ಸಹ ನೋಡೋದಿಲ್ಲ. ಇಂತಹ ಕಾಲಘಟ್ಟದಲ್ಲಿ ಮಹಿಳೆಯೊಬ್ಬಳು ಒಳ್ಳೆಯ ಕೆಲಸ, ಕುಟುಂಬದವರು ನಿಶ್ಚಯಿಸಿದ್ದ ವರನನ್ನು ತೊರೆದು ನಿರುದ್ಯೋಗಿಯಾಗಿದ್ದ ಯುವಕನ ಕೈಹಿಡಿದ ಅಚ್ಚರಿ ಘಟನೆಯೊಂದು ಸದ್ಯ ಬೆಳಕಿಗೆ ಬಂದಿದೆ.

ಹೌದು, ಬಿಹಾರದ ಯುವತಿಯೊಬ್ಬಳು ತನಗೆ ಕುಟುಂಬದವರು ಈಗಾಗಲೇ ನಿಶ್ಚಯಿಸಿದ್ದ ಮದುವೆಗೆ ಇನ್ನೇನು ಒಂದು ವಾರ ಬಾಕಿ ಉಳಿದಿದೆ ಎನ್ನುವಷ್ಟರೊಳಗೆ ಆಕೆ ತಾನು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಮನೆಬಿಟ್ಟು ಹೋಗಿ ವಿವಾಹವಾಗಿದ್ದಾಳೆ. ಈ ಶಾಕಿಂಗ್ ಘಟನೆ ಬಿಹಾರದ ಟೆಟಾರಿಯಾ ಗ್ರಾಮದಲ್ಲಿ ವರದಿಯಾಗಿದೆ.

ಯುವತಿಯ ತಂದೆ-ತಾಯಿ ಆಕೆಗಾಗಿ ವರನನ್ನು ಆಯ್ಕೆ ಮಾಡಿ, ಮದುವೆ ದಿನಾಂಕವನ್ನು ಕೂಡ ನಿಶ್ಚಯಿಸಿದ್ದರು. ಈ ವಿವಾಹಕ್ಕಾಗಿ ಮೊದಲೇ ಎಲ್ಲಾ ತಯಾರಿಗಳನ್ನು ಏರ್ಪಡಿಸಿದ್ದ ಕುಟುಂಬಸ್ಥರ ನಿರ್ಧಾರವನ್ನು ಮುರಿದ ಈಕೆ, ಮದುವೆಗೆ ಇನ್ನೇನು ಒಂದು ವಾರವಿದೆ ಎನ್ನುವಷ್ಟರೊಳಗೆ ತಾನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನೊಂದಿಗೆ ಮನೆಬಿಟ್ಟು ಹೋಗಿ ಮದುವೆಯಾಗಿದ್ದಾಳೆ.

ಯುವತಿಯನ್ನು ವರ್ಷಾ ಕುಮಾರಿ ಎಂದು ಹೇಳಲಾಗಿದ್ದು, ಉದ್ಯೋಗಸ್ಥ ವರನನ್ನು ಮದುವೆಯಾಗುವ ತನ್ನ ಕುಟುಂಬದ ಆಸೆಯನ್ನು ಧಿಕ್ಕರಿಸಿ ಐದು ವರ್ಷಗಳಿಂದ ಜತೆಗಿದ್ದ ತನ್ನ ಪ್ರಿಯಕರ ಉಮೇಶ್ ಯಾದವ್​ ಜತೆ ವಿವಾಹವಾಗಿದ್ದಾಳೆ. ವರ್ಷಾ ಅವರ ಕುಟುಂಬಕ್ಕೆ ಈ ಹಿಂದೆಯೇ ಉಮೇಶ್​ನೊಂದಿಗಿನ ಸಂಬಂಧದ ಬಗ್ಗೆ ತಿಳಿದಿತ್ತು. ಆದರೆ ಆತ ನಿರುದ್ಯೋಗಿ ಎಂದು ಅವನಿಗೆ ಮದುವೆ ಮಾಡಿಕೊಡಲು ಪೋಷಕರು ತೀವ್ರ ವಿರೋಧಿಸಿದ್ದರು.

ಯುವತಿಯ ಮನೆಯವರು ಮುಂಗೇರ್ ಜಿಲ್ಲೆಯ ವ್ಯಕ್ತಿಯೊಂದಿಗೆ ಆಕೆಯ ಮದುವೆಯನ್ನು ನಿಶ್ಚಯಿಸಿದ್ದರು. ಮದುವೆ ಇದೇ ಮಾರ್ಚ್ 11ರಂದು ನಡೆಯಬೇಕಿತ್ತು. ಆದರೆ, ಮದುವೆಗೆ ಏಳು ದಿನಗಳಷ್ಟೇ ಬಾಕಿ ಉಳಿದಿರುವ ಮೊದಲೇ ವರ್ಷಾ ತನ್ನ ಪ್ರಿಯಕರ ಉಮೇಶ್ ಜತೆ ಮನೆಬಿಟ್ಟು ದೇವಸ್ಥಾನದಲ್ಲಿ ವಿವಾಹವಾಗಿ, ನಂತರದಲ್ಲಿ ಮನೆ ಮಾಡಿ ವಾಸಿಸುತ್ತಿದ್ದರು.

ವರ್ಷಾ ಮನೆಯವರು ಪೊಲೀಸರೊಂದಿಗೆ ಆಕೆಯ ಅತ್ತೆಯ ಮನೆಗೆ ಆಗಮಿಸಿ ದಂಪತಿಯನ್ನು ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದ್ರೆ, ಪೊಲೀಸರು ಮತ್ತು ಸ್ಥಳೀಯರು ಸುತ್ತುವರೆದಿದ್ದರಿಂದ ಪರಸ್ಪರ ಅಂಟಿಕೊಂಡಿದ್ದ ದಂಪತಿಯನ್ನು ಬೇರ್ಪಡಿಸಲು ಸಾಧ್ಯವಾಗಿಲ್ಲ. ಬಳಿಕ

ಗ್ರಾಮಸ್ಥರು ಪ್ರೇಮಿಗಳನ್ನು ಮನವೊಲಿಸಿ, ಪೊಲೀಸ್ ಠಾಣೆಗೆ ಹೋಗಲು ತಿಳಿಸಿದರು,(ಏಜೆನ್ಸೀಸ್).