ಬೆಂಗಳೂರು: ವಿಡಿಯೋ ಕಾಲ್ ಮಾಡಿದ ಮಹಿಳೆಯ ಬೆಣ್ಣೆಯಂತಹ ಮಾತುಗಳನ್ನು ಕೇಳಿ ಸ್ವಲ್ಪವೂ ಯೋಚಿಸದೇ ಬಟ್ಟೆ ಬಿಚ್ಚಿ ಅವಳೆದುರು ಬೆತ್ತಲಾದ ಬೆಂಗಳೂರು ಮೂಲದ ವ್ಯಕ್ತಿ, ಇದೀಗ ಹಣ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾನೆ.
ಫೆ. 7ರಂದು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿ, ರೆಕಾರ್ಡ್ ಮಾಡಿಕೊಂಡ ಮಹಿಳೆ, ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಸಿ ಸಂತ್ರಸ್ತ ವ್ಯಕ್ತಿಯಿಂದ 20 ಸಾವಿರೂ ರೂ. ಹಣ ಪೀಕಿದ್ದಾಳೆ. ಸಂತ್ರಸ್ತನನ್ನು ಅಂಬಿತ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಶ್ರೇಯಾ ಎಂಬಾಕೆಯ ವಿರುದ್ಧ ವಂಚನೆ ಮತ್ತು ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾರೆ.
ಅಂಬಿತ್ ಮತ್ತು ಶ್ರೇಯಾ ನಡುವೆ ಮ್ಯಾಟ್ರಿಮೊನಿಯಲ್ ವೆಬ್ಸೈಟ್ ಮೂಲಕ ಪರಿಚಯವಾಗಿದೆ. ತಾನೊರ್ವ ಸಾಫ್ಟ್ವೇರ್ ಇಂಜಿನಿಯರ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಅಂಬಿತ್ ಬಳಿ ಶ್ರೇಯಾ ಪರಿಚಯಿಸಿಕೊಂಡಿದ್ದಾಳೆ. ಬಳಿಕ ಮದುವೆ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.
ಹೀಗೆ ಇಬ್ಬರ ನಡುವಿನ ಪರಿಚಯ ಗಾಢವಾದಂತೆ ತನ್ನ ಕರಾಳ ಮುಖ ಪ್ರದರ್ಶಿಸಿದ ಶ್ರೇಯಾ, ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿದ್ದಾಳೆ. ಬಳಿಕ ತನ್ನ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ತನ್ನ ಬಟ್ಟೆಗಳನ್ನು ಬಿಚ್ಚಿದ್ದಾಳೆ. ಬಳಿಕ ಆತನನ್ನು ಬಟ್ಟೆ ಬಿಚ್ಚುವಂತೆ ಹೇಳಿದ್ದಾಳೆ.
ಅವಳು ಹೇಳಿದಂತೆ ನಾನು ಬಟ್ಟೆ ಬಿಚ್ಚುವಾಗ ರೆಕಾರ್ಡ್ ಮಾಡಿಕೊಂಡಳು. ಬಳಿಕ 1 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಳು. ಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿದಳು. ಫೆ. 7ರಂದು ನಾನು 20 ಸಾವಿರ ರೂ. ನೀಡಿದೆ. ಇದೀಗ ಇನ್ನು ಹೆಚ್ಚಿನ ಹಣಕ್ಕೆ ಆಕೆ ಬೇಡಿಕೆ ಇಡುತ್ತಿದ್ದಾಳೆ ಎಂದು ಅಂಬಿತ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)