ನ್ಯೂಸ್

ಅಕ್ಕನ ಮಗನ ಹೊಟ್ಟೆ ಬಗೆದು ರಕ್ತ ಕುಡಿದಳು, ಹೃದಯವನ್ನೂ ಕಿತ್ತೆಸೆದಳು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ ಇದು!

ಗುಂಟೂರು: ಮಹಿಳೆಯೊಬ್ಬಳು ತನ್ನ ಅಕ್ಕನ ಮಗನ ಹೊಟ್ಟೆ ಬಗೆದು, ರಕ್ತ ಕುಡಿದು ಹೃದಯವನ್ನೇ ಹೊರ ಕಿತ್ತಿರುವ ರಾಕ್ಷಸಿ ಕೃತ್ಯ ಆಂಧ್ರ ಪ್ರದೇಶದಲ್ಲಿ ನಡೆದಿದ್ದು, ಭೀಕರ ಘಟನೆಗೆ ಇಡೀ ರಾಜ್ಯವೇ ಬೆದರಿದೆ.

ಗುಂಟೂರಿನಲ್ಲಿ ಘಟನೆ ನಡೆದಿದ್ದು, ಮೃತ ಅಕ್ಕನ ಮಗನ ವಯಸ್ಸು ಕೇವಲ ಏಳು ವರ್ಷ ವಷ್ಟೇ. ಆರೋಪಿ ಮಹಿಳೆಯನ್ನು ಮಾನಸಿಕ ಅಸ್ವಸ್ಥಳು ಎಂದು ಹೇಳಲಾಗಿದ್ದು, ಆಕೆಯನ್ನು ಆಸಿಯಾ ಎಂದು ಗುರುತಿಸಲಾಗಿದೆ. ಈಕೆ ನರಸರೋಪೇಟ್​ ಮಂಡಲದ ಯಲ್ಲಮಂಡ ನಿವಾಸಿ ಸಲಾಂ ಎಂಬುವವರೊಂದಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಪತಿ ಗ್ರಾಮದಲ್ಲೇ ಕೆಲಸ ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಆಸಿಯಾ ಗುಂಟೂರಿನಲ್ಲಿರುವ ತಮ್ಮ ಅಕ್ಕನ ಮನೆಗೆ ಬಂದಿದ್ದಳು. ಈ ವೇಳೆ ಆಕೆಯ ವರ್ತನೆ ವಿಚಿತ್ರವಾಗಿತ್ತು. ಮಾನಸಿಕವಾಗಿ ಅಸ್ವಸ್ಥಳಂತೆ ವರ್ತಿಸುತ್ತಿದ್ದಳು ಎಂದು ಬಾಲಕನ ಕುಟುಂಬದವರು ಹೇಳಿದ್ದಾರೆ. ಆದರೆ, ಈ ರೀತಿ ಮಾಡುತ್ತಾಳೆಂದು ನಾವು ಅಂದುಕೊಂಡಿರಲಿಲ್ಲ ಎಂದು ಮಗನನ್ನು ಕಳೆದುಕೊಂಡ ಕುಟುಂಬ ದುಃಖದಿಂದಲೇ ಕಣ್ಣೀರಾಕಿತು.

ಮನೆಯಲ್ಲಿ ಯಾರು ಇಲ್ಲದ ವೇಳೆ ಆಸಿಯಾ ಕೃತ್ಯವೆಸಗಿದ್ದು, ಹೊಟ್ಟೆಯನ್ನು ಬಗೆದು, ರಕ್ತವನ್ನು ಕುಡಿದು ಬಳಿಕ ಹೃದಯವನ್ನು ಕಿತ್ತು ಹೊರಗೆಸೆದಿದ್ದಾಳೆ. ಇದಾದ ಬೆನ್ನಲ್ಲೇ ಘಟನೆಗೆ ಸಾಕ್ಷಿಯಾದ ಇತರೆ ಮಕ್ಕಳನ್ನು ಮನೆಯಲ್ಲೇ ಕೂಡಿ ಹಾಕಿ ಆಸಿಯಾ ಅಲ್ಲಿಂದ ಪರಾರಿಯಾಗಿದ್ದಾಳೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಲಕಲೂರಿಪೇಟೆ ಪೊಲೀಸರು ಪರಿಶೀಲನೆ ನಡೆಸಿ ಬಾಲಕನ ಶವವನ್ನು ಪರೀಕ್ಷೆಗಾಗಿ ಸ್ಥಳೀಯ ಸರ್ಕಾರ ಆಸ್ಪತ್ರೆಗೆ ರವಾನಿಸಿದ್ದು, ಕೂಡಿ ಹಾಕಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಆಸಿಯಾಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)