ನ್ಯೂಸ್

ಬಿಎಂಟಿಸಿ ಬಸ್‌ಗೆ ಮಹಿಳೆ ಬಲಿ

ಬೆಂಗಳೂರು: ಬಿಎಂಟಿಸಿ ಬಸ್‌ಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಮಹಿಳೆ, ಕಾರಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾಳೆ.

ಸೊನ್ನೆನಹಳ್ಳಿಯ ಮಾರುತಿನಗರ ನಿವಾಸಿ ಮೋನಿಕಾ (28) ಮೃತ ಮಹಿಳೆ. ಮಂಗಳವಾರ ಬೆಳಗ್ಗೆ 9.30ರಲ್ಲಿ ವಿಶ್ವೇಶ್ವರಯ್ಯ ಲೇಔಟ್ 100 ಅಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಬಿಎಂಟಿಸಿ ಮತ್ತು ಕಾರು ಚಾಲನ ವಿರುದ್ಧ ಜ್ಞಾನಭಾರತಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಡ್ಯ ಮೂಲದ ಮೋನಿಕಾ, 4 ವರ್ಷಗಳ ಹಿಂದೆ ಮದುವೆ ಆಗಿದ್ದು, ಮಾರುತಿನಗರದಲ್ಲಿ ಪತಿ ಜತೆಗೆ ನೆಲೆಸಿದ್ದರು. ಪಾಪರೆಡ್ಡಿಪಾಳ್ಯದಲ್ಲಿನ ಬೈಕ್ ಮಾರಾಟ ಮಳಿಗೆಯಲ್ಲಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಬೆಳಗ್ಗೆ 9.50ರಲ್ಲಿ ಎಂದಿನಂತೆ ಜ್ಯೂಪಿಟರ್ ಸ್ಕೂಟರ್‌ನಲ್ಲಿ ಮೋನಿಕಾ, ಕೆಲಸಕ್ಕೆ ಹೊರಟ್ಟಿದ್ದರು. ವಿಶ್ವೇಶ್ವರಯ್ಯಲೇಔಟ್ 100 ಅಡಿ ರಸ್ತೆ ಉಲ್ಲಾಳ ಕೆರೆ ಬಳಿ ಹೋಗುತ್ತಿದ್ದಾಗ ಎದುರಿಗೆ ಬಂದ ಬಿಎಂಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ರಸ್ತೆಗೆ ಬಿದ್ದಿ ಮೋನಿಕಾ ತಲೆ ಹಿಂದೆ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ 50 ಮೀಟರ್ ಎಳೆದುಕೊಂಡು ಹೋಗಿದ್ದು, ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಅಸುನೀಗಿದ್ದರು. ಸ್ಥಳೀಯರು ರಕ್ಷಣೆಗೆ ಬಂದರೂ ಪ್ರಯೋಜನವಾಗಲಿಲ್ಲ. ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ವಿಷಯ ತಿಳಿದ ಜ್ಞಾನಭಾರತಿ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಬಿಎಂಟಿಸಿ ಬಸ್ ಮತ್ತು ಕಾರನ್ನು ಜಪ್ತಿ ಮಾಡಿ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ. ಮೃತಳ ಪತಿ ಕೊಟ್ಟ ದೂರಿನ ಮೇರೆಗೆ ಜ್ಞಾನಭಾರತಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.