ನ್ಯೂಸ್

ಶ್ರೀನಗರ ಬಟಮಲೂನಲ್ಲಿ ಎನ್​ಕೌಂಟರ್- ಒಬ್ಬ ಮಹಿಳೆ ಹತ, ಇಬ್ಬರು ಯೋಧರಿಗೆ ಗಾಯ

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದ ಬಟಮಲೂ ಪ್ರದೇಶದಲ್ಲಿ ಗುರುವಾರ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ರಕ್ಷಣಾ ಪಡೆ ಮತ್ತು ಉಗ್ರ ನಡುವೆ ಗುಂಡಿನ ಚಕಮಕಿ ನಡೆದು, ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಬಟಮಲೂ ಪ್ರದೇಶದಲ್ಲಿ ಉಗ್ರರು ಇರುವ ಖಚಿತ ಮಾಹಿತಿ ಆಧರಿಸಿ ಸೆಂಟ್ರಲ್ ರಿಸರ್ವ್ ಪೊಲೀಸ್​ ಫೋರ್ಸ್​ (ಸಿಆರ್​ಪಿಎಫ್​) ಯೋಧರು ಗುರುವಾರ ನಸುಕಿನಲ್ಲಿ ಶೋಧಕಾರ್ಯ ಆರಂಭಿಸಿದ್ದರು. ಬಟಮಲೂವಿನ ಫಿರ್ದೂಸಾಬಾದ್ ಎಂಬಲ್ಲಿ ನಸುಕಿನ 2.30ರ ವೇಳೆಗೆ ಶೋಧ ಕಾರ್ಯ ಆರಂಭವಾಗುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಪರಿಣಾಮ ರಕ್ಷಣಾ ಪಡೆಯ ಯೋಧರೂ ಪ್ರತಿದಾಳಿ ನಡೆಸಿದರು. ಈ ಸಂಘರ್ಷದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ ಭಾಗದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಬಹಿರಂಗವಾಗಬೇಕಷ್ಟೆ. (ಏಜೆನ್ಸೀಸ್)