ಫತೇಹಪುರ: ಉತ್ತರಪ್ರದೇಶದ ಫತೇಹಪುರದಿಂದ ಅಪಹರಣಗೊಂಡಿದ್ದ 3 ವರ್ಷದ ಹೆಣ್ಣುಮಗುವನ್ನು ಪೊಲೀಸರು ಪಂಬಾಬ್ನ ಜಲಂಧರ್ನಲ್ಲಿ ಪತ್ತೆ ಹಚ್ಚಿದ್ದಾರೆ. ಪ್ರೇಮಿಯೊಂದಿಗೆ ಹೋಟೆಲ್ನಲ್ಲಿರುವಾಗ ಸಾಧಾರಣವಾದ ದಂಪತಿಯಂತೆ ಕಾಣಿಸುವ ಉದ್ದೇಶದಿಂದ ಮಗುವಿನ ಸೋದರತ್ತೆಯೇ ಮಗುವನ್ನು ಕದ್ದೊಯ್ದಿದ್ದಳು ಎನ್ನಲಾಗಿದೆ.
ಉತ್ತರ ಪ್ರದೇಶದ ಫತೇಹಪುರ ನಿವಾಸಿಯಾದ 20 ವರ್ಷದ ನಿಶು ದ್ವಿವೇದಿ, ಪಂಜಾಬ್ನ ಜಲಂಧರ್ನ ನವದೀಪ್ ಸಿಂಗ್ ಅಲಿಯಾಸ್ ಗಿನ್ನಿ(25) ಎಂಬುವ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಮನೆಯಿಂದ ಓಡಿ ಹೋಗಿ ಅವನನ್ನು ಮದುವೆ ಆಗಬೇಕೆಂದು ಪ್ಲಾನ್ ಮಾಡಿದ ಆಕೆ, ಮಾರ್ಚ್ 2 ರಂದು ತನ್ನೊಂದಿಗೆ ಸೋದರನ 3 ವರ್ಷದ ಮಗುವನ್ನೂ ಯಾರಿಗೂ ತಿಳಿಸದೆ ಕರೆದೊಯ್ದಿದ್ದಾಳೆ.
ಮಗುವಿನ ಅಪಹರಣದ ತನಿಖೆ ಆರಂಭಿಸಿದ ಫತೇಹಪುರ ಪೊಲೀಸರು, ಶುಕ್ರವಾರ (ಮಾರ್ಚ್ 5) ಜಲಂಧರ್ ತಲುಪಿ, ಅತ್ತೆಯ ಬಳಿಯಿದ್ದ ಮಗುವನ್ನು ಸುರಕ್ಷಿತವಾಗಿ ವಾಪಸ್ ಮನೆಗೆ ಕರೆತಂದಿದ್ದಾರೆ. ಈ ಸಂಬಂಧವಾಗಿ ಯುವಜೋಡಿಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆಯ ಸಮಯದಲ್ಲಿ, ನಿಶು, ತನ್ನ ಪ್ರೇಮಿ ಗಿನ್ನಿಯನ್ನು ಮದುವೆಯಾಗುವ ಉದ್ದೇಶದಿಂದ ತೆರಳಿದ್ದೆ. ಹೋಟೆಲ್ನಲ್ಲಿ ಇಬ್ಬರೂ ಗಂಡಹೆಂಡತಿಯಂತೆ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತಂಗುವ ಉದ್ದೇಶದಿಂದ, ಮಗುವನ್ನು ಜೊತೆಗೆ ಕರೆದೊಯ್ದೆ ಎಂದು ಹೇಳಿದ್ದಾಳೆ. ಮಗುವಿಗೆ ಯಾವುದೇ ರೀತಿಯ ಹಾನಿ ಮಾಡುವ ಉದ್ದೇಶ ತನಗಿರಲಿಲ್ಲ ಎಂದಿದ್ದಾಳೆ ಎಂದು ಫತೇಹಪುರ ಎಸ್ಪಿ ಸತ್ಪಾಲ್ ಅಂಟಿಲ್ ತಿಳಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ