ನ್ಯೂಸ್

ಮಹಿಳೆಯ ಅಪಹರಣ ಪ್ರಕರಣ: ಜೆಡಿಎಸ್ ಶಾಸಕ ಎಚ್​.ಡಿ ರೇವಣ್ಣಗೆ ಜಾಮೀನು ಮಂಜೂರು!

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರು, ಸುದೀರ್ಘವಾದ ವಾದ - ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದ್ದಾರೆ.

ಈ ವೇಳೆ ರೇವಣ್ಣ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ – ಪ್ರತಿವಾದಗಳು ನಡೆದಿವೆ. ಇಂಥ ಕಾರಣಗಳಿಗೆ ಜಾಮೀನು ಕೊಡಲೇ ಬೇಕು ಎಂದು ರೇವಣ್ಣ ಪರ ವಕೀಲರಾದ ನಾಗೇಶ್‌ ವಾದ ಮಂಡಿಸಿದರೆ, ಜಾಮೀನನ್ನು ಏಕೆ ಕೊಡಬಾರದು? ಕೊಟ್ಟರೆ ಮುಂದೇನಾಗುತ್ತದೆ ಎಂದು ಎಸ್‌ಐಟಿ ಪರ ವಕೀಲರಾದ (ಎಸ್‌ಪಿಪಿ) ಜಯ್ನಾ ಕೊಠಾರಿ ಹಾಗೂ ಅಶೋಕ್‌ ನಾಯ್ಕ್‌ ವಾದಿಸಿದ್ದಾರೆ.

ನ್ಯಾಯಾಲಯದಿಂದ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ನಾಳೆ (ಮಂಗಳವಾರ) ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕೋರ್ಟ್​ನ ಷರತ್ತುಗಳೇನು?

  • ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚನೆ
  • ಸಾಕ್ಷ್ಯಾಧಾರ ನಾಶಪಡಿಸಬಾರದು.
  • ಮಂಡ್ಯ ಜಿಲ್ಲೆಯ ಕೆ.ಆರ್.ನಗರ ತಾಲೂಕು ಪ್ರವೇಶಿಸುವಂತಿಲ್ಲ
  • ಎಸ್‌ಐಟಿ ತನಿಖೆಗೆ ಸಹಕರಿಸಬೇಕು.