ನ್ಯೂಸ್

ನಾಲ್ಕು ಮಕ್ಕಳನ್ನು ನೀರಿಗೆ ದೂಡಿ ತಾನೂ ಹಾರಿದ ತಾಯಿ; ಮಹಿಳೆ ಮತ್ತು ಹಿರಿಯ ಮಗಳು ಬಚಾವ್…

ಬುರ್ಹಾನ್​ಪುರ: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಭಾನುವಾರ 30 ವರ್ಷದ ತಾಯಿ ಒಬ್ಬಳು ತನ್ನ ನಾಲ್ಕು ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ನೀರಿಗೆ ಬಿದ್ದ ನಂತರ ಪ್ರಾಣಭಯ ಉಂಟಾಗಿ ಆ ಮಹಿಳೆ ಬಾವಿಯಲ್ಲಿ ನೇತಾಡುತ್ತಿದ್ದ ಹಗ್ಗವನ್ನು ಹಿಡಿದುಕೊಂಡು ತನ್ನ ಹಿರಿಯ ಮಗಳೊಂದಿಗೆ ಬಚಾವಾಗಿದ್ದಾರೆ. ಈ ಸಂದರ್ಭ ನೀರಿಗೆ ಬಿದ್ದ 18 ತಿಂಗಳ ಮಗ ಮತ್ತು ಮೂರು ವರ್ಷದ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ.

ಬುರ್ಹಾನ್‌ಪುರ ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿರುವ ಬಾಲ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ. ಪ್ರಮೀಳಾ ಭಿಲಾಲ ಎಂದು ಗುರುತಿಸಲಾದ ಮಹಿಳೆ ತನ್ನ ಪತಿ ರಮೇಶ್ ಜೊತೆ ಜಗಳವಾಡಿದ ನಂತರ ಈ ಭೀಕರ ಹೆಜ್ಜೆ ಇಟ್ಟಿದ್ದಾಳೆ ಎಂದು ಪೊಲೀಸರು ಹೇಳಿದರು.

ಪ್ರಮೀಳಾ ಅವರ ಮನೆ ಘಟನಾ ಸ್ಥಳಕ್ಕೆ ಸಮೀಪದಲ್ಲೇ ಇದೆ. ಬಾವಿಯಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಪ್ರಮೀಳಾ ಮತ್ತು ಆಕೆಯ ಏಳು ವರ್ಷದ ಮಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)