ನ್ಯೂಸ್

ಸಿಡಿಮದ್ದು ಸ್ಫೋಟಗೊಂಡು ಮಹಿಳೆಗೆ ಗಾಯ

ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿ ಹುಲ್ಯಾಳು ಗ್ರಾಮದಲ್ಲಿ ಸಿಡಿಮದ್ದು ಸ್ಫೋಟಿಸಿ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗ್ರಾಮದ ಲೋಕೇಶಾಚಾರಿಯವರ ಪತ್ನಿ ಕಮಲಮ್ಮ(54) ಗಾಯಗೊಂಡವರಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಶುಕ್ರವಾರ ಮಧ್ಯಾಹ್ನ ಕಮಲಮ್ಮ ತಮ್ಮ ಮನೆ ಮುಂದೆ ಅಂಗಳದಲ್ಲಿ ಕುಳಿತಿದ್ದಾಗ ಬೀದಿಯಲ್ಲಿ ಕವರ್ ಒಂದು ಕಣ್ಣಿಗೆ ಬಿತ್ತು. ಕವರ್‌ನ್ನು ತಂದು ತೆರೆದು ನೋಡಿದಾಗ ಅಡಿಕೆ ಗಾತ್ರದ ಉರುಟಾದ ವಸ್ತುವೊಂದು ಇತ್ತು. ಅಡಿಕೆ ಎಂದು ಭಾವಿಸಿದ ಕಮಲಮ್ಮ ಅದನ್ನು ಕಲ್ಲಿನಿಂದ ಚಚ್ಚಿದಾಗ ಸ್ಫೋಟಗೊಂಡು ಮುಖ, ಕೈ ಮತ್ತು ಕಾಲುಗಳಿಗೆ ತೀವ್ರತರನಾಗಿ ಗಾಯಗೊಂಡಿದ್ದಾರೆ. ಕೂಡಲೇ ಕಮಲಮ್ಮ ಅವರನ್ನು ಮೈಸೂರಿನ ಕೆಆರ್.ಅಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕವು ನಾಡಬಾಂಬ್ ಅಥವಾ ಸಿಡಿಬಾಂಬ್ ಎನ್ನುವುದು ಇನ್ನೂ ಖಚಿತವಾಗಿಲ್ಲ. ಸ್ಥಳಪರಿಶೀಲನೆ ನಡೆಸಿ ಎಫ್‌ಎಸ್‌ಎಲ್ ವರದಿಗೆ ಕಳುಹಿಸಲಾಗುವುದು, ವರದಿ ಬಂದ ನಂತರ ಘಟನೆಗೆ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.