ಚಿಂತಾಮಣಿ: ತಾಲೂಕಿನ ಮದನಪಲ್ಲಿ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಾಡಿಕೆರೆ ಗ್ರಾಮದ ಜಯಮ್ಮ (59) ಮೃತೆ. ಚಿಂತಾಮಣಿಯಲ್ಲಿರುವ ಚಿಕ್ಕಮ್ಮನ ಮನೆಗೆ ಆ.3ರಂದು ಹೋಗಿ ವಾಪಸ್ ಹೋಗುತ್ತಿದ್ದಾಗ ಗ್ರಾಮದ ಗೇಟ್ನಲ್ಲಿ ಬೆಂಗಳೂರು ಕಡೆಯಿಂದ ಬಂದ ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿ ಜಯಮ್ಮ ಗಾಯಗೊಂಡಿದ್ದರು. ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಬಳಿಕ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಆ.4 ರಂದು ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.