ನ್ಯೂಸ್

ಶಿವನನ್ನು ಮೆಚ್ಚಿಸುವುದಕ್ಕಾಗಿ ಜೀವಂತ ಸಮಾಧಿಯಾದ ಮಹಿಳೆ! ಮಹಿಳೆಯ ಹುಚ್ಚಾಟಕ್ಕೆ ಊರವರ ಸಾಥ್​

ಲಖನೌ: ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಯುವತಿಯೊಬ್ಬಳು ಮರುಜನ್ಮ ಪಡೆಯುವ ನಿಟ್ಟಿನಲ್ಲಿ ತಂಗಿಯನ್ನು ಕೊಂದು ತಾನೂ ಅಪ್ಪ ಅಮ್ಮನಿಂದ ಕೊಲೆಯಾಗಿರುವ ಘಟನೆ ಪೂರ್ತಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದೇ ರೀತಿಯ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಶಿವನನ್ನು ಮೆಚ್ಚಿಸುವ ಸಲುವಾಗಿ ಮಹಿಳೆಯೊಬ್ಬಳು ಜೀವಂತ ಸಮಾಧಿಯಾಗಲು ಹೋಗಿದ್ದು, ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.

ಘಟಂಪರ ಪ್ರದೇಶದ ಸಜೆತಿಯಲ್ಲಿ ಈ ರೀತಿಯ ಘಟನೆ ನಡೆದಿದೆ. ಗೋಮತಿ ದೇವಿ (50)ಯ ಗಂಡ ರಾಮ್​ ಸಜೀವನ್​ ಶಿವ ದೇವರ ಪರಮ ಭಕ್ತನಂತೆ. ಗಂಡನಂತೆ ತಾನೂ ಶಿವನ ಬಗ್ಗೆ ಭಕ್ತಿಯನ್ನು ಮೂಡಿಸಿಕೊಂಡಿದ್ದ ಗೋಮತಿಗೆ ಮಂಗಳವಾರ ರಾತ್ರಿ ಶಿವ ಕನಸಿನಲ್ಲಿ ಬಂದಿದ್ದನಂತೆ. ಈ ವಿಚಾರವನ್ನು ಆಕೆ ಕುಟುಂಬ ಮತ್ತು ಗ್ರಾಮಸ್ಥರ ಬಳಿ ಹಂಚಿಕೊಂಡಿದ್ದಾಳೆ. ಅದಾದ ನಂತರ ನನ್ನನ್ನು ಮನೆ ಎದುರು ಗುಂಡಿ ದೋಡಿ, ಹೂತು ಹಾಕಿ ಎಂದು ಕೇಳಿದ್ದಾಳೆ. ನಾನು ಶಿವನನ್ನು ಒಲಿಸಿಕೊಳ್ಳಬೇಕೆಂದರೆ ನೀವು ಹಾಗೆ ಮಾಡಬೇಕು ಎಂದು ತಿಳಿಸಿದ್ದಾಳೆ.

ಗೋಮತಿ ಹೇಳಿದಂತೆ ಆಕೆಯ ಕುಟುಂಬಸ್ಥರು ಮನೆಯ ಮುಂಭಾಗದಲ್ಲಿ ನಾಲ್ಕು ಅಡಿ ಆಳದ ಗುಂಡಿಯೊಂದನ್ನು ತೆಗೆದಿದ್ದಾರೆ. ಗ್ರಾಮಸ್ಥರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಆ ಗುಂಡಿಗೆ ಗೋಮತಿ ಪೂಜೆ ಮಾಡಿದ್ದಾಳೆ. ಅದಾದ ಮೇಲೆ ಗುಂಡಿಯೊಳಗೆ ಇಳಿದು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದಾಳೆ. ಗುಂಡಿಯ ಮೇಲೆ ಒಂದು ಮಂಚವನ್ನು ಇಡಲಾಗಿದೆ. ನಂತರ ಕುಟುಂಬಸ್ಥರು ಗುಂಡಿಗೆ ಮಣ್ಣು ತುಂಬಲಾರಂಭಿಸಿದ್ದಾರೆ. ಊರವರು ಗುಂಡಿಗೆ ಹೂವನ್ನು ಎಸೆಯುತ್ತಾ ಭಜನೆ ಮಾಡಲಾರಂಭಿಸಿದ್ದಾರೆ.

ಈ ಕೃತ್ಯವನ್ನು ಕಂಡು ಭಯಬಿದ್ದ ಕೆಲ ಗ್ರಾಮಸ್ಥರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಈ ಆಚರಣೆಯನ್ನು ತಡೆದಿದ್ದಾರೆ. ಅರ್ಧ ಮುಚ್ಚಿದ್ದ ಗೋಮತಿಯನ್ನು ಗುಂಡಿಯಿಂದ ಮೇಲಕ್ಕೆತ್ತಲಾಗಿದೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. (ಏಜೆನ್ಸೀಸ್​)