ನ್ಯೂಸ್

ತನ್ನ ಗಂಡನ ಬಗ್ಗೆ ಚಾಟ್​ ಜಿಪಿಟಿ ಹೇಳಿದ ಮಾತು ಕೇಳಿ ಡಿವೋರ್ಸ್​ ಕೊಡಲು ಮುಂದಾದ ಪತ್ನಿ! Chat GPT

Chat GPT : ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ ದಾಂಪತ್ಯ ದ್ರೋಹ ಹಾಗೂ ಕೌಟುಂಬಿಕ ಹಿಂಸಾಚಾರ. ಅಷ್ಟೇ ಅಲ್ಲ, ಸಣ್ಣ ಸಣ್ಣ ವಿಚಾರಗಳಿಗೂ ಗಂಡ-ಹೆಂಡತಿ ನಡುವೆ ಉಂಟಾಗುತ್ತಿರುವ ಮನಸ್ತಾಪಗಳು ಕೂಡ ಇದಕ್ಕೆ ಕಾರಣ. ಇದೀಗ ಗ್ರೀಸ್‌ನ ಮಹಿಳೆಯೊಬ್ಬರು ತಮ್ಮ ಗಂಡನಿಂದ ಬೇರೆಯಾಗಲು ಬಹಳ ವಿಚಿತ್ರವಾದ ಕಾರಣ ನೀಡುವ ಮೂಲಕ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾರೆ.

ಗ್ರೀಸ್​ ಮೂಲದ ದಂಪತಿ ಹನ್ನೆರಡು ವರ್ಷಗಳ ಹಿಂದೆ ಮದುವೆಯಾದರು. ಇಬ್ಬರು ಮಕ್ಕಳನ್ನು ಸಹ ಹೊಂದಿದ್ದಾರೆ. ಇದೀಗ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ತನ್ನ ಗಂಡನ ಅಕ್ರಮ ಸಂಬಂಧವನ್ನು ಕಂಡುಹಿಡಿದಿದ್ದೇನೆ ಎಂದು ಹೇಳಿಕೊಂಡು ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದು ಕೇಳಲು ವಿಚಿತ್ರ ಎನಿಸಿದರೂ ಇದೇ ಸತ್ಯ. ಅಷ್ಟಕ್ಕೂ ಆಕೆ ಹೇಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಳು ಎಂಬುದನ್ನು ನಾವೀಗ ತಿಳಿಯೋಣ.

ಗ್ರೀಸ್​ ಮಹಿಳೆ, ಚಾಟ್ ಜಿಪಿಟಿಯಲ್ಲಿ ಒಂದು ಕಪ್ ಕಾಫಿಯಲ್ಲಿ ಉಳಿದಿರುವ ಕಾಫಿ ಪುಡಿಯನ್ನು ಬಳಸಿಕೊಂಡು ಭವಿಷ್ಯವನ್ನು ಊಹಿಸುವ ಪ್ರಾಚೀನ ವಿಧಾನವಾದ ಟ್ಯಾಸಿಯೋಗ್ರಫಿಯ ಆಧುನಿಕ ಸ್ವರೂಪವನ್ನು ಸರ್ಚ್​ ಮಾಡಿದಳು. ಆಕೆ ತನ್ನ ಮತ್ತು ತನ್ನ ಪತಿಯ ಕಾಫಿ ಕಪ್‌ಗಳ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಅವುಗಳನ್ನು ಅರ್ಥೈಸಲು ಚಾಟ್​ ಜಿಪಿಟಿಯನ್ನು ಕೇಳಿಕೊಂಡಳು.

ಈ ವೇಳೆ ಚಾಟ್ ಜಿಪಿಟಿ ನೀಡಿದ ಉತ್ತರ ಆಕೆಯ ಕುಟುಂಬವನ್ನೇ ನಾಶಮಾಡುವಂತಿದೆ. ನಿಮ್ಮ ಪತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಮತ್ತು ಆಕೆ ನಿಮ್ಮ ಕುಟುಂಬವನ್ನು ಒಡೆಯುತ್ತಾಳೆ ಎಂದು ಚಾಟ್ ಜಿಪಿಟಿ ಭವಿಷ್ಯ ನುಡಿದಿದೆ. ಅಷ್ಟೇ ಅಲ್ಲದೆ, ನಿಮ್ಮ ಪತಿಯ ಗೆಳತಿಯ ಹೆಸರಿನ ಮೊದಲ ಅಕ್ಷರ 'ಇ' ಯಿಂದ ಪ್ರಾರಂಭವಾಗುತ್ತದೆ ಅಂತಾನೂ ಚಾಟ್​ ಜಿಪಿಟಿ ಹೇಳಿದೆ. ಬಳಿಕ ಸ್ವಲ್ಪವೂ ಯೋಚಿಸದ ಪತ್ನಿ, ಗಂಡನಿಂದ ಡಿವೋರ್ಸ್​ಗೆ ಬೇಡಿಕೆ ಇಟ್ಟಿದ್ದಾಳೆ.

ಈ ಬಗ್ಗೆ ಮಹಿಳೆಯ ಪತಿ ಗ್ರೀಕ್​ ಸಿಟಿ ಟೈಮ್ಸ್​ ಜತೆ ಮಾತನಾಡಿದ್ದು, ಚಾಟ್​ ಜಿಪಿಟಿಯ ಉತ್ತರ ಅಸಂಬದ್ಧವೆಂದು ನಾನು ನಕ್ಕಿದ್ದೆ. ಆದರೆ, ಆಕೆ ಅದನ್ನು ಗಂಭೀರವಾಗಿ ಪರಿಗಣಿಸಿದಳು. ಅಲ್ಲದೆ, ನನ್ನನ್ನು ಹೊರಗೆ ಹೋಗಲು ಹೇಳಿದಳು. ನಾವಿಬ್ಬರು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ನಮ್ಮ ಮಕ್ಕಳಿಗೆ ಹೇಳಿದಳು. ಇದಾದ ನಂತರ ನನಗೆ ವಕೀಲರಿಂದ ಕರೆ ಬಂತು. ಚಾಟ್​ ಜಿಪಿಟಿ ಹೇಳಿದ್ದನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆಂಬುದು ಆಗಲೇ ನನಗೆ ಅರಿವಾಯಿತು ಎಂದಿದ್ದಾರೆ. (ಏಜೆನ್ಸೀಸ್​)