ನ್ಯೂಸ್

ಚಿರತೆ ಜತೆಗೆ ಹೋರಾಡಿದ ಮಹಿಳೆ, 2 ವರ್ಷದ ಪುತ್ರನಿಗಾಗಿ ಹೋರಾಟ

ವಡೋದರ: ಚಿರತೆಯೊಂದಿಗೆ ಹೋರಾಡಿದ ಮಹಿಳೆಯೊಬ್ಬರು ತಮ್ಮ ಎರಡು ವರ್ಷದ ಪುತ್ರನನ್ನು ರಕ್ಷಿಸಿಕೊಂಡಿದ್ದಾರೆ. ಚಿರತೆ ತನ್ನ ಬಾಯಲ್ಲಿ ಕಚ್ಚಿಕೊಂಡಿದ್ದ ಮಗುವನ್ನು ಎರಡು ಕಾಲು ಹಿಡಿದು ಎಳೆದುಕೊಂಡು ಅವರು ರಕ್ಷಿಸಿಕೊಂಡಿದ್ದಾರೆ.

ಗುಜರಾತ್​ನ ಪಂಚಮಹಲ್​ ಜಿಲ್ಲೆಯ ಘೋಗಾಂಬಾ ತಾಲೂಕದ ಧರಂಖೇತರ್​ ಗ್ರಾಮದಲ್ಲಿ ಭಾನುವಾರ ಮುಂಜಾನೆಯಲ್ಲಿ ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದು ಮನೆಯೊಂದಕ್ಕೆ ನುಗ್ಗಿತ್ತು. ತಾಯಿಯೊಂದಿಗೆ ಮಲಗಿದ್ದ 2 ವರ್ಷದ ಮಗು ಗಣೇಶ್​ ಭೂಪೇಂದ್ರನ ಕತ್ತನ್ನು ಕಚ್ಚಿಹಿಡಿದು ಪರಾರಿಯಾಗಲು ಯತ್ನಿಸಿತ್ತು.

ತುಂಬಾ ಶೆಕೆ ಇದ್ದುದರಿಂದ, ಗಾಳಿ ಬರಲಿ ಎಂದು ಮುಂಬಾಗಿಲನ್ನು ಸ್ವಲ್ಪ ತೆರೆದಿದ್ದೆ. ನನ್ನ ಪತಿ ನೀಲಗೈಗಳ ಹಾವಳಿ ತಪ್ಪಿಸಲು ಹೊಲದ ಕಾವಲಿಗೆ ತೆರಳಿದ್ದರು. ಹಾಗಾಗಿ ನಾನು ಮತ್ತು ನನ್ನ ಪುತ್ರ ಇಬ್ಬರನೇ ಮನೆಯಲ್ಲಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ.

ಚಿರತೆ ತನ್ನ ಕತ್ತನ್ನು ಕಚ್ಚಿ ಹಿಡಿಯುತ್ತಿದ್ದಂತೆ ಗಣೇಶ್​ ಜೋರಾಗಿ ಅಳಲಾರಂಭಿಸಿದ್ದ. ಈ ಸದ್ದು ಕೇಳಿ ಎದ್ದ ನಾನು ಆತನ ಕಾಲು ಹಿಡಿದು ಎಳೆದುಕೊಂಡೆ. ಚಿರತೆಯು ಹಿಡಿತ ಸಡಿಲಿಸಿದ್ದಿರಬೇಕು. ತಲೆ ಮತ್ತು ಬಲಗಣ್ಣಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಆತ ಪಾರಾದ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವಿವರಿಸಿದ್ದಾರೆ.

ಇವರಿಬ್ಬರ ಕಿರುಚಾಟ ಕೇಳಿ ನೆರೆಹೊರೆಯವರು ಸಹಾಯಕ್ಕೆ ಮುಂದಾಗುತ್ತಿದ್ದಂತೆ ಹೆದರಿದ ಚಿರತೆ, ಪಕ್ಕದಲ್ಲೇ ಇದ್ದ ಮೆಕ್ಕೆಜೋಳದ ಹೊಲದೊಳಗೆ ಹೊಕ್ಕು ಕಣ್ಮರೆಯಾಯಿತು ಎಂದು ತಿಳಿಸಿದ್ದಾರೆ.