ನ್ಯೂಸ್

ಸೇತುವೆಯಿಂದ ನದಿಗೆ ಬಿದ್ದ ಯುವತಿ; ರಕ್ಷಿಸಿದ ಆಟೋ ಚಾಲಕ

ತಮಿಳುನಾಡು: ಪೂಜಾ ವಿಧಿ ವಿಧಾನ ನೆರವೇರಿಸುವ ವೇಳೆ ನೇಪಿಯರ್ ಸೇತುವೆಯಿಂದ 20 ವರ್ಷದ ಯುವತಿಯೊಬ್ಬಳು ನದಿಗೆ ಬಿದ್ದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ಬುಧವಾರ (ಸೆ.20) ತನ್ನ ತಾಯಿಯೊಂದಿಗೆ ತಮಿಳುನಾಡಿನ ಕೌಮ್ ನದಿಯ ನೇಪಿಯರ್ ಸೇತುವೆಯಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನದ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಆಟೋ ಚಾಲಕರೊಬ್ಬರು ನದಿಗೆ ಜಿಗಿದು ಯುವತಿಯನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.

ನದಿಗೆ ಬಿದ್ದ ಯುವತಿಯನ್ನು ಕೃತಿಕಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸೇತುವೆ ಮೇಲಿಂದ ಪೂಜಾ ಸಾಮಾಗ್ರಿಗಳನ್ನು ನದಿಗೆ ಎಸೆಯುವ ವೇಳೆ ಆಯಾತಪ್ಪಿ ಬಿದ್ದಿದ್ದಾಳೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಆಟೋರಿಕ್ಷಾ ಚಾಲಕ ಮಹೇಶ್ ಗಮನಿಸಿದ್ದು, ತಕ್ಚಣವೇ ಕೃತಿಕಾಳನ್ನು ರಕ್ಷಿಸಲು ನದಿಗೆ ಹಾರಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮಹಿಳೆಯನ್ನು ಎಳೆಯಲು ಹಗ್ಗದ ಸಹಾಯವನ್ನು ನೀಡಿದ್ದಾರೆ.

ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸುತ್ತಲಿನ ಸಂದರ್ಭಗಳ ಬಗ್ಗೆ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದು, ಕೃತಿಕಾ ಬಿದ್ದಿರುವುದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದನ್ನು ತಿಳಿಯಲು ಮುಂದಾಗಿದ್ದಾರೆ,(ಏಜೆನ್ಸೀಸ್).