ನ್ಯೂಸ್

ಸತತ ಎರಡು ವರ್ಷ ಸಕ್ಯುಲೆಂಟ್​ ಸಸ್ಯಕ್ಕೆ ನೀರೆರೆದು ಆರೈಕೆ ಮಾಡಿದ ಮಹಿಳೆ; ಒಂದು ದಿನ ಅದನ್ನು ಪಾಟ್​ನಿಂದ ಹೊರತೆಗೆಯುತ್ತಿದ್ದಂತೆ ಫುಲ್​ ಶಾಕ್​...

ಈ ಮಹಿಳೆಗೆ ಸಸ್ಯಗಳೆಂದರೆ ತುಂಬ ಪ್ರೀತಿ. ಒಂದು ಸಕ್ಯುಲೆಂಟ್​ ಜಾತಿಯ ಸಸ್ಯವನ್ನು ಪಾಟ್​ನಲ್ಲಿ ಇದ್ದಂತೆ ತಂದು ಅದರ ಆರೈಕೆಯಲ್ಲಿ ತೊಡಗಿದ್ದರು. ಪ್ರತಿದಿನವೂ ನೀರು ಹಾಕುತ್ತಿದ್ದರು, ತುಂಬ ಪ್ರೀತಿಯಿಂದ ನಿರ್ವಹಣೆ ಮಾಡುತ್ತಿದ್ದರು. ಆದರೆ...

ಎರಡು ವರ್ಷಗಳಾದರೂ ಆ ಸಸ್ಯದಲ್ಲಿ ಒಂದು ಚೂರೂ ಬದಲಾವಣೆ ಕಂಡುಬರಲಿಲ್ಲ. ತರುವಾಗ ಹೇಗಿತ್ತೋ ಹಾಗೇ ಇತ್ತು. ಆದರೆ ಸಹನೆ ಕಳೆದುಕೊಳ್ಳದ ಸಸ್ಯಪ್ರೇಮಿ ಮಹಿಳೆ, ಸಕ್ಯುಲೆಂಟ್ ಸಸ್ಯವನ್ನು ಪಾಟ್​ನಿಂದ ತೆಗೆದು, ಬೇರೆ ಪಾಟ್​ನಲ್ಲಿ ನೆಡಲು ನಿರ್ಧರಿಸಿದರು. ಆದರೆ ಸಸ್ಯವನ್ನು ಹೊರತೆಗೆಯುತ್ತಿದ್ದಂತೆ ಬಹುದೊಡ್ಡ ಶಾಕ್​ಗೆ ಒಳಗಾದರು.

ಆಸ್ಟ್ರೇಲಿಯಾದ ಕೇಲಿ ವಿಲ್ಕೆಸ್ ಅವರಿಗೊಂದು ವಿಚಿತ್ರ ಅನುಭವ ಆಗಿದೆ. ಒಂದು ದಿನ ಸಕ್ಯುಲೆಂಟ್​ ಸಸ್ಯದ ಪಾಟ್​ ತೆಗೆದುಕೊಂಡು ಬಂದ ಅವರು ಅದಕ್ಕೆ ಪ್ರತಿದಿನ ನೀರೆರೆಯುತ್ತಿದ್ದರು. ಅದರ ಎಲೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಅದಕ್ಕೆ ಸೂರ್ಯನ ಬೆಳಕು ಸರಿಯಾಗಿ ತಾಗುತ್ತಿದೆಯಾ ಎಂಬುದನ್ನೂ ನಿಯಮಿತವಾಗಿ ಪರಿಶೀಲನೆ ಮಾಡುತ್ತಿದ್ದರು. ಸತತ ಎರಡು ವರ್ಷ ಇದನ್ನೇ ಮಾಡಿದರೂ ಏನೇನೂ ಬದಲಾವಣೆ ಆಗದೆ ಇರುವಾಗ ಅವರಿಗೊಂದು ಯೋಚನೆ ಬಂತು.

ಪಾಟ್​ ಬದಲಿಸಿ, ಸೂಕ್ತವಾಗಿ ಮಣ್ಣು, ಗೊಬ್ಬರ ನೀಡಬೇಕು ಎಂದು ಯೋಚಿಸಿದರು. ಅದಕ್ಕೆ ತಕ್ಕದಾದ ಹೂದಾನಿಯನ್ನು ತೆಗೆದುಕೊಂಡು ಬಂದ ಅವರು ಗಿಡವನ್ನು ಮೊದಲು ಪಾಟ್​ನಿಂದ ಹೊರತೆಗೆದರು. ಆದರೆ ಸಸ್ಯವನ್ನು ತೆಗೆಯುತ್ತಿದ್ದಂತೆ ಅದೊಂದು ಪೂರ್ತಿ ಪ್ಲಾಸ್ಟಿಕ್​ದು ಎಂಬುದು ಬೆಳಕಿಗೆ ಬಂತು.

ನಾನು ಈ ಸಸ್ಯವನ್ನು ಎಷ್ಟು ಕಾಳಜಿ ಮಾಡಿದೆ. ಆದರೆ ಅದು ಪೂರ್ತಿ ಪ್ಲಾಸ್ಟಿಕ್​ ಗಿಡವಾಗಿತ್ತು. ಎಷ್ಟರ ಮಟ್ಟಿಗೆ ಅದನ್ನು ರೂಪಿಸಿದ್ದರೆಂದರೆ ಅದು ಪ್ಲಾಸ್ಟಿಕ್​ ಗಿಡವೆಂಬುದು ಗೊತ್ತೇ ಆಗುತ್ತಿರಲಿಲ್ಲ. ಈಗೆರಡು ವರ್ಷಗಳಿಂದ ನಾನು ನಂಬಿದ್ದು ಒಂದು ಸುಳ್ಳನ್ನು ಎಂಬುದನ್ನು ಈಗ ನನಗೆ ಒಪ್ಪಿಕೊಳ್ಳಲಾಗುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಫೇಸ್​ಬುಕ್​ನಲ್ಲಿ ಕೇಲಿ ವಿಲ್ಕೆಸ್ ಅವರ ಸ್ಟೋರಿ ವೈರಲ್ ಆಗುತ್ತಿದ್ದಂತೆ ಹಲವರು ತಮಗೂ ಈ ಅನುಭವ ಆಗಿದ್ದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)