ಆಂಧ್ರಪ್ರದೇಶ: ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ತೀರ ಸಾಮಾನ್ಯ. ಗಂಡ-ಹೆಂಡತಿ ನಡುವಿನ ವಿರಸ, ಮುನಿಸು ದಾಂಪತ್ಯದ ಒಂದು ಭಾಗ ಎಂದೇ ಹೇಳಬಹುದು. ಇಂತಹ ವಿಷಯಗಳು ಸಮಸ್ಯೆಯಾಗಿ ಕಂಡುಬಂದರೆ ಅದನ್ನು ಬಗೆಹರಿಸಿಕೊಳ್ಳಬಹುದು ಅಥವಾ ಪರಿಹಾರ ಕಂಡುಕೊಳ್ಳಬಹುದು. ಆದರೆ, ಪತಿ ಮತ್ತು ಪತ್ನಿಯ ಮಧ್ಯೆ ಮೂರನೇ ವ್ಯಕ್ತಿ ಪ್ರವೇಶವಾದರೆ ಅದನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಈ ರೀತಿಯ ಘಟನೆಗಳಲ್ಲಿ ಕೊಲೆ, ಆತ್ಮಹತ್ಯೆ ನಡೆದಿರುವ ನಿದರ್ಶನಗಳೇ ಹೆಚ್ಚು. ಸದ್ಯ ಇಲ್ಲೊಂದು ಪ್ರಕರಣ ಕೂಡ ಇದೇ ಸಾಲಿಗೆ ಸೇರಿದ್ದು, ಗಂಡ ಮತ್ತು ತನ್ನ ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನ ಹಿಂದೆ ಬಿದ್ದ ಮಹಿಳೆ (Woman Dies) ಇದೀಗ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದ್ದಾಳೆ.
ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಸುಖ ಸಂಸಾರ ಆನಂದಿಸುತ್ತಿದ್ದ ಮಹಿಳೆ, ಮತ್ತೋರ್ವ ವ್ಯಕ್ತಿಯ ಜತೆ ದೈಹಿಕ ಸಂಬಂಧ ಬೆಳೆಸಿ ಗಂಡನಿಗೆ ಮೋಸ ಮಾಡಿದ್ದಾಳೆ. ತಾನು ಮಾಡ್ತಿರೋದು ತಪ್ಪು, ಹೋಗ್ತಿರುವ ದಾರಿ ಸರಿಯಿಲ್ಲ ಎಂದು ಗೊತ್ತಿದ್ದರೂ ಸಹ ಆಕೆ ಆತನನ್ನು ಬಿಟ್ಟಿರಲಿಲ್ಲ. ಕೊನೆಗೆ ಅಕ್ರಮ ಸಂಬಂಧವೇ ತನಗೆ ಶಾಪವಾಗಿ ಪರಿಣಮಿಸಿ ಇದೀಗ ಕೊಲೆಯಲ್ಲಿ ಮೃತಪಟ್ಟಿದ್ದಾಳೆ. ಸತ್ಯಸಾಯಿ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಹತ್ಯೆಗೈದ ಘಟನೆ ಭಾರೀ ಸಂಚಲನ ಮೂಡಿಸಿದೆ.
ಬೋಬುಲದೇವರ ಚೆರುವು ಮಂಡಲದ ಕೊಂಡಕಮರ್ಲದಲ್ಲಿ ಮೃತ ಮಹಿಳೆ ಮೆಹ್ತಾಜ್ (32) ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಳು. ಈ ಮಧ್ಯೆ ಆಕೆ ಇರ್ಫಾನ್ (28) ಎಂಬ ಯುವಕನನ್ನು ಭೇಟಿಯಾಗಿದ್ದಳು. ಆ ಪರಿಚಯ ಪ್ರೇಮಕ್ಕೆ ತಿರುಗಿ, ಅನೈತಿಕ ಸಂಬಂಧಕ್ಕೆ ಕಾರಣವಾಗಿದೆ. ಆದರೆ ಮೆಹ್ತಾಜ್ ತನ್ನ ಪತಿಯ ಜತೆಗಿರುವುದು ಆಕೆಯ ಪ್ರಿಯಕರ ಇರ್ಫಾನ್‌ಗೆ ಸಹಿಸಲಾಗುತ್ತಿರಲಿಲ್ಲ. ಇದೇ ವಿಷಯಕ್ಕೆ ಆಕೆಯೊಂದಿಗೆ ಜಗಳವಾಡುತ್ತಿದ್ದ.
ಈ ವಿಷಯಕ್ಕೆ ಇಬ್ಬರ ನಡುವೆ ದೊಡ್ಡ ಜಗಳ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 31ರ ರಾತ್ರಿ ಮೆಹ್ತಾಜ್ ಮನೆಗೆ ತೆರಳಿದ ಇರ್ಫಾನ್, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಮೆಹ್ತಾಜ್ ಪೋಷಕರ ದೂರಿನ ಮೇರೆಗೆ ಇರ್ಫಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).