ಕೊಚ್ಚಿ: ಮಹಾಮಾರಿ ಕರೊನಾ ವೈರಸ್ ಲಾಕ್ಡೌನ್ ಹೇರಿಕೆಯ ಉಚಿತ ಸಮಯದಲ್ಲಿ ಸಾಕಷ್ಟು ಮಂದಿಗೆ ತುಂಬಾ ಕೆಲಸಗಳನ್ನು ಮಾಡಿ ತಮ್ಮ ಗುರಿ ಮುಟ್ಟಿದ್ದಾರೆ. ಇನ್ನು ಕೆಲವರು ಪ್ರಯತ್ನಿಸಿದಾದರೂ ಸಾಧ್ಯವಾಗಿಲ್ಲ. ಆದರೆ, ಕೇರಳದ ಮಹಿಳೆಯೊಬ್ಬರು ಎಲ್ಲರಿಗಿಂತ ತುಸು ವಿಭಿನ್ನ ಎನಿಸಿಕೊಂಡಿದ್ದು, ವಿಶೇಷವಾದುದ್ದನ್ನೇ ಸಾಧಿಸಿದ್ದಾರೆ.
ಕೇರಳದ ಕೊಚ್ಚಿಯಲ್ಲಿರುವ ಎಂಇಎಸ್ ಕಾಲೇಜಿನ ಎಂಎಸ್ಸಿ ಬಯೋಕೆಮಿಸ್ಟ್ರಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿರುವ ಆರತಿ ರೆಘುನಾಥ್, ಕೇವಲ ಮೂರು ತಿಂಗಳಲ್ಲಿ 350 ಕೋರ್ಸ್ ಪೂರ್ಣಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೊಚ್ಚಿಯ ಎಲಮಕ್ಕರ ನಿವಾಸಿಯಾಗಿರುವ ಆರತಿ, ಯೂನಿವರ್ಸಲ್ ರೆಕಾರ್ಡ್ ಫೋರಮ್ನಲ್ಲಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಕೋರ್ಸ್ಗಳನ್ನು ಅಧ್ಯಯನ ಮಾಡಲು ಆರತಿ ಆರಂಭಿಸಿದರು. ಇದೀಗ ವಿಶ್ವದಾಖಲೆಯನ್ನೇ ಬರೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನನ್ನನ್ನು ಆನ್ಲೈನ್ ಕೋರ್ಸ್ ಜಗತ್ತಿಗೆ ಪರಿಚಯಿಸಿದ್ದು ನಮ್ಮ ಕಾಲೇಜಿನ ಅಧ್ಯಾಪಕರು. ಆನ್‌ಲೈನ್‌ನಲ್ಲಿ ಹಲವಾರು ಶ್ರೇಣಿಯ ಕೋರ್ಸ್‌ಗಳಿವೆ. ಇವೆಲ್ಲವೂ ಅವಧಿ ಮತ್ತು ಪಠ್ಯಕ್ರಮದಲ್ಲಿ ಬದಲಾವಣೆಯನ್ನು ಹೊಂದಿವೆ. ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಅಜಿಮ್ಸ್ ಪಿ ಮುಹಮ್ಮದ್, ಸಂಯೋಜಕರಾದ ಹನೀಫಾ ಕೆ ಜಿ ಮತ್ತು ನಮ್ಮ ಕ್ಲಾಸ್ ಟೀಚರ್ ನೀಲಿಮಾ ಟಿ.ಕೆ. ಅವರ ಬೆಂಬಲದಿಂದ ಈ ಎಲ್ಲ ಕೋರ್ಸ್ಗಳನ್ನು ಕೆಲವೇ ವಾರಗಳಲ್ಲಿ ಮುಗಿಸಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಮಗಳ ಸಾಧನೆ ಬಗ್ಗೆ ತಾಯಿ ಮಲಿಯೆಕ್ಕಲ್ ಮದಥಿ ಮತ್ತು ತಂದೆ ಎಂ. ಆರ್. ರೆಘುನಾಥ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯಗಳಾದ ಜಾನ್ ಹಾಕಿನ್ಸ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ವರ್ಜಿನಿಯಾ, ಯೂನಿವರ್ಸಿಟಿ ಆಫ್ ಕೊಲರಡೋ ಬೌಲ್ಡರ್, ಯೂನಿವರ್ಸಿಟಿ ಆಫ್ ನ್ಯೂಯಾರ್ಕ್, ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್ ಮತ್ತು ದಿ ಯೂನಿವರ್ಸಿಟಿ ಆಫ್ ಕೋಪ್ಹೇಗನ್ನಲ್ಲಿ ಆರತಿ ಆನ್ಲೈನ್ ಕ್ಲಾಸ್ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. (ಏಜೆನ್ಸೀಸ್)