ಬೆಂಗಳೂರು: ನಕಲಿ ಪೊಲೀಸರ ಹಾವಳಿ ಹೆಚ್ಚಾಗುತ್ತಿದೆ. ಪೊಲೀಸ್ ಬಟ್ಟೆ ತೊಟ್ಟು ಅಮಾಯಕರಿಂದ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಇದೀಗ ಹೆಚ್ಚೆಚ್ಚು ವರದಿಯಾಗುತ್ತಿವೆ. ಇದೀಗ ಮಹಿಳೆಯೊಬ್ಬಳು ತಾನು ಪೊಲೀಸ್ ಎಂದು ಹೇಳಿಕೊಂಡು ಬಜ್ಜಿ, ಬೋಂಡಾ ತಿಂದಿದ್ದಾಳೆ. ಅಂಗಡಿಯಾತ ದುಡ್ಡು ಕೇಳಿದಾಗ ಧಮ್ಕಿ ಹಾಕಿದ್ದಾಳೆ.
ಮಹಿಳೆಯೊಬ್ಬಳು ತಾನು ಪೊಲೀಸ್ ಎಂದು ಹೇಳಿಕೊಂಡು ಧಮ್ಕಿ ಹಾಕಿ ಜಜ್ಜಿ ತಿನ್ನುತ್ತಿದ್ದಳು. ನಾನು ಕೊಡಿಗೆಹಳ್ಳಿ ಪೊಲೀಸ್, ಬಂದಾಗಲೆಲ್ಲಾ ಬಜ್ಜಿ ಕೊಡಬೇಕು. ಇಲ್ಲದಿದ್ದರೆ ನಾಳೆಯಿಂದ ನಿನ್ನ ಅಂಗಡಿಯನ್ನು ಎತ್ತಂಗಡಿ ಮಾಡಿಸುತ್ತೇನೆ ಎಂದಿದ್ದಳು. ಆಕೆ ಪೊಲೀಸ್ ಎಂಬ ಭಯಕ್ಕೆ ದಿನವೂ ಬೋಂಡ, ಬಜ್ಜಿ ನೀಡುತ್ತಿದ್ದೆ ಎಂದು ವ್ಯಾಪಾರಿ ಶೇಕ್ ಸಲಾಂ ಹೇಳಿಕೊಂಡಿದ್ದಾನೆ.
ಬ್ಯಾಟರಾಯನಪುರ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಶೇಕ್ ಸಲಾಂ ನಡೆಸುತ್ತಿದ್ದ ಅಂಗಡಿಗೆ ಮತ್ತದೇ ಪೊಲೀಸ್ ಸೋಗಿನಲ್ಲಿ ಬಂದು ಬೋಂಡಾ, ಬಜ್ಜಿ ತಿಂದಿದ್ದಾಳೆ. ನಂತರ ಪಾರ್ಸೆಲ್ ಕೂಡ ತೆಗೆದುಕೊಂಡಿದ್ದಾಳೆ. ಈ ವೇಳೆ ಶೇಕ್ ಸಲಾಂ ಒಟ್ಟು ನೂರು ರೂಪಾಯಿ ಆಯಿತು ಎಂದಾಗ ಧಮ್ಕಿ ಹಾಕಿ ಜಗಳ ಮಾಡಿದ್ದಾಳೆ.
ನೊಂದ ವ್ಯಾಪಾರಿ ಶೇಕ್ ಸಲಾಂ ಕೂಡಲೇ ಪೊಲೀಸ್ ಸಹಾಯವಾಣಿ 112 ಸಂಖ್ಯೆಗ ಕರೆ ಮಾಡಿದ್ದಾನೆ. ಕೂಡಲೇ ಪೊಲೀಸ್ ಎಂದು ಹೇಳಿಕೊಂಡಿದ್ದಾಕೆ ತನ್ನ ಬೈಕ್ನಲ್ಲಿ ಪರಾರಿಯಾಗಿದ್ದಾಳೆ. ಈ ಬಗ್ಗೆ ವ್ಯಾಪಾರಿ ಶೇಕ್ ಸಲಾಂ ನಕಲಿ 'ಪೊಲೀಸ್' ಮೇಲೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸದ್ಯ ಪೊಲೀಸ್ ವೇಷ ತೊಟ್ಟಿದ್ದ ಮಹಿಳೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.