ನ್ಯೂಸ್

ಡಿವೋರ್ಸಗೆ ಅರ್ಜಿ ಹಾಕಿದ ಮಗಳು; ಮರ್ಯಾದೆಗೆ ಅಂಜಿ ಪುತ್ರಿಯ ಕಾಲು ಕತ್ತರಿಸಿದ ಪೋಷಕರು

ನವದೆಹಲಿ: ಗಂಡನ ದೌರ್ಜನ್ಯ ಎಸಗುತ್ತಿದ್ದಾನೆ. ಆತನ ಜೊತೆ ಬಾಳಲು ಸಾಧ್ಯವಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ ಮಗಳ ಕಾಲುಗಳನ್ನು ಆಕೆಯ ತಂದೆ ಹಾಗೂ ಸಂಬಂಧಿಕರು ಸೇರಿಕೊಂಡು ಕತ್ತರಿಸಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

ಸಂತ್ರಸ್ತೆಯನ್ನು ಸೋಬಿಯಾ ಬಟೂಲ್ ಷಾ ಎಂದು ಗುರುತಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಸೋಬಿಯಾಳ ತಂದೆ ಸೈಯದ್ ಮುಸ್ತಫಾ ಷಾ,  ಚಿಕ್ಕಪ್ಪಂದಿರಾದ ಸೈಯದ್ ಕುರ್ಬಾನ್ ಷಾ, ಎಹ್ಸಾನ್ ಷಾ, ನವಾಜ್ ಷಾ ಮತ್ತು ಮುಷ್ತಾಕ್ ಷಾ ತಲೆಮಾರಿಸಿಕೊಂಡಿದ್ದಾರೆ. ಪೊಲೀಸರು ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಸೋಬಿಯಾ, ಮದುವೆಯಾದ ನಂತರ ನನ್ನ ಗಂಡ ಮನೆ ಜವಾಬ್ದಾರಿಯನ್ನು ತೆಗೆದುಕೊಂಡಿರಲಿಲ್ಲ. ಈ ಬಗ್ಗೆ ಕೇಳಿದಾಗ ಆತ ನನ್ನನ್ನು ನಿಂದಿಸಿ ಹಲ್ಲೆ ಮಾಡುತ್ತಿದ್ದ. ಇಬ್ಬರು ಮಕ್ಕಳನ್ನು ಕೂಡಾ ನೋಡುವ ಜವಾಬ್ದಾರಿ ಆತನಿಗಿಲ್ಲ. ಕರಾಚಿಯಲ್ಲಿ ನಾನು ಒಬ್ಬಳೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ನಾನು ಪಡುತ್ತಿರುವ ಕಷ್ಟ, ಅನುಭವಿಸುತ್ತಿರುವ ದೌರ್ಜನ್ಯ ಬಗ್ಗೆ ಪೋಷಕರಿಗೆ ಅನೇಕ ಬಾರಿ ಹೇಳಿದ್ದೆ.. ಅವರು ಇದಕ್ಕೆ ಕಿವಿಗೊಡಲೇ ಇಲ್ಲ. ಹೀಗೆಲ್ಲ ಗಂಡನ ಬಗ್ಗೆ ದೂರುವುದು ಅವಮಾನ ಎಂದು ಕುಟುಂಬ ಆಕೆಯ ಮಾತನ್ನು ತಳ್ಳಿತ್ತು. ಹೀಗಾಗಿ ನಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದೆ.

ಈ ವಿಚಾರವನ್ನು ನಾನು ನನ್ನ ತಂದೆಗೆ ತಿಳಿಸಿದೆ. ಅವರು ನನ್ನ ಸಂಬಂಧಿಕರೊಡನೆ ಸೇರಿ ಕೊಡಲಿಯಿಂದ ಕಾಲನ್ನು ಕತ್ತರಿಸಿ ಪರಾರಿಯಾಗಿದ್ದಾರೆ. ನೋವಿನಿಂದ ನರಳುತ್ತ ರಸ್ತೆಯಲ್ಲಿ ಬಿದ್ದಿದ್ದರು ಯಾರು ಸಹ ನನ್ನ ಸಹಾಯಕ್ಕೆ ಬರಲಿಲ್ಲ. ಪೊಲೀಸರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಘಟನೆಯಿಂದ ತೀವ್ರವಾದ ದೈಹಿಕ ಮತ್ತು ಮಾನಸಿಕ ಆಘಾತವನ್ನು ಉಂಟು ಮಾಡಿದ್ದು, ಆಕೆ ಮತ್ತೆಂದೂ ನಡೆಯಲು ಸಾಧ್ಯವಾಗದ ಹಾಗೆ ಅಂಗ ವೈಕಲ್ಯವುಂಟಾಗಿದೆ ಎಂದಯ ಸೋಬಿಯಾ ಬೇಸರ ಹೊರಹಾಕಿದ್ದಾರೆ.

ನೌಶರೋಫೆರೋಜ್‌ನ ಹಿರಿಯ ಪೊಲೀಸ್ ಅಧೀಕ್ಷಕರು ಈ ಬಗ್ಗೆ ಮಾತನಾಡಿದ್ದು, ಸೋಬಿಯಾ ತನ್ನ ಪತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಕುಟುಂಬಕ್ಕೆ ಅವಮಾನ ಮಾಡಿದ್ದಾಳೆ ಎಂದು ಆಕೆಯ ತಂದೆ ಹಾಗೂ ಸಂಬಂಧಿಕರು ಈ ಅಮಾನವೀಯ ಕೃತ್ಯವನ್ನು ಎಸಗಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಇವರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.