ನ್ಯೂಸ್

ಎಲ್​ಐಸಿ ಹಣದಲ್ಲಿ ಪಾಲು ನೀಡಲು ಒಪ್ಪದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ

ವಿಜಯಪುರ: ಎಲ್​​ಐಸಿ ಹಣಕ್ಕಾಗಿ ಮಹಿಳೆಯೋರ್ವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದಲ್ಲಿ ನಡೆದಿದೆ.

ತಾಂಡಾದ ನಿವಾಸಿ ಲಕ್ಷ್ಮೀ ಮೋತಿಲಾಲ ನಾಯಕ ಹಲ್ಲೆಗೊಳಗಾದ ಮಹಿಳೆ. ಈಕೆಯ ಮೇಲೆ ಎಲ್​ಐಸಿ ಏಜೆಂಟ್​ನ ಮಗ ಹಾಗೂ ತಂಡದಿಂದ ಹಲ್ಲೆ ನಡೆದಿದೆ.

ಆರೋಪಿಗಳು ಹಣದಲ್ಲಿ ಪಾಲು ನೀಡುವಂತೆ ಪೀಡಿಸುತ್ತಿದ್ದರು. ಆದರೆ ಲಕ್ಷ್ಮೀ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಪೊಲೀಸರಿಗೆ ದೂರು ನೀಡಲು ಹೋಗುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಬೈಕ್​ನಲ್ಲಿ ಬಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಜೀವ ಬೆದರಿಕೆ ಹಾಕಿದ್ದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಲಕ್ಷ್ಮೀ ಅವರ ಪತಿ ಮೋತಿಲಾಲ ಕಳೆದ ವರ್ಷ ಮೃತಪಟ್ಟಿದ್ದ. ಇದರಿಂದ ಆತನ ವಿಮಾ ಹಣ 16.50 ಲಕ್ಷ ರೂಪಾಯಿ ಜಮಾ ಆಗಿತ್ತು.

ಹಲ್ಲೆ ನಡೆಸಿದವರನ್ನು ಸರೂರ ತಾಂಡಾದ ಮುತ್ತು ಹಣಮಂತ ನಾಯಕ, ರಾಘು ಹಣಮಂತ ನಾಯಕ, ಶ್ರೀಕಾಂತ ಕೃಷ್ಣಪ್ಪ ಚವ್ಹಾಣ ಹಾಗೂ ಎಲ್ಐಸಿ ಏಜೆಂಟ ಅರ್ಜುನ ಜಾಧವನ ಮಗ ರಾಹುಲ್ ಎಂದು ಗುರುತಿಸಲಾಗಿದೆ.

ಹಲ್ಲೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಕ್ರಮ ಕೈಗೊಳ್ಳಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.(ದಿಗ್ವಿಜಯ ನ್ಯೂಸ್​)