ಕೊಚ್ಚಿ: ಮಹಿಳೆ ಮಿಲನಕ್ಕೆ ಸಮ್ಮತಿಸಿದರೆ ಸಾಕು. ಅದು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂಬ ವಾದ ಇದುವರೆಗೂ ಎಲ್ಲೆಡೆ ಜನಜನಿತವಾಗಿತ್ತು. ಆದರೆ, ಅತ್ಯಾಚಾರ ಎಂಬ ಪದಕ್ಕೆ ಹೊಸ ವ್ಯಾಖ್ಯಾನ ನೀಡಿರುವ ಕೇರಳ ಹೈಕೋರ್ಟ್, ಸಮ್ಮತಿಸಿದರೆ ಸಾಲದು... ಮಹಿಳೆ ಇಷ್ಟಪಟ್ಟು ಮಿಲನಕ್ಕೆ ಸಹಕರಿಸಬೇಕು. ಇಲ್ಲವಾದರೆ ಅದು ಅತ್ಯಾಚಾರ ಎಂದು ಅನಿಸಿಕೊಳ್ಳುತ್ತದೆ ಎಂದು ಹೇಳಿದೆ.
ಅಮೆರಿಕದ ಸುಪ್ರೀಂಕೋರ್ಟ್ 1986ರಲ್ಲಿ ಮೆರಿಟರ್ ಸೇವಿಂಗ್ಸ್ ಬ್ಯಾಂಕ್ V/s ವಿನ್ಸನ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಪಿ.ಬಿ. ಸುರೇಶ್ಕುಮಾರ್, ಸಮ್ಮತಿ ಎಂಬುದನ್ನು ಗಂಡು ಮತ್ತು ಹೆಣ್ಣಿನ ಮಿಲನಕ್ಕೆ ಅಗತ್ಯ. ಆದರೆ ಅದು ಲಿಂಗ ಸಮಾನತೆಯ ಪರಮಾರ್ಥದಲ್ಲಿ ಮಹಿಳೆಯ ಹಕ್ಕುಗಳನ್ನು ಉಲ್ಲಂಘಿಸುವಂತಿರಬಾರದು ಎಂದು ಹೇಳಿದ್ದಾರೆ.
ಭಾರತದ ವಿಷಯದಲ್ಲಿ ಹೇಳುವುದಾದರೆ, ನಮ್ಮ ದೇಶ ಲಿಂಗ ಸಮಾನತೆಗೆ ಒಪ್ಪಿಕೊಂಡಿದೆ. ಮಹಿಳೆಯರು ಇಷ್ಟಪಟ್ಟು ಮಿಲನಕ್ಕೆ ಮುಂದಾಗುವುದನ್ನು ಸಮ್ಮತಿಸಿದ ಮಿಲನ ಎಂದು ಕರೆಯಬಹುದಾಗಿದೆ ಎಂದು ವಿವರಿಸಿದ್ದಾರೆ.
ಅತ್ಯಾಚಾರವೂ ಒಳಗೊಂಡಂತೆ ಲೈಂಗಿಕ ಶೋಷಣೆ ಲಿಂಗ ಅಸಮಾನತೆ ಎನಿಸಿಕೊಳ್ಳುತ್ತದೆ ಎಂಬ ವಿಶ್ವಸಂಸ್ಥೆಯ ಹೇಳಿಕೆಯೊಂದನ್ನು ಉಲ್ಲೇಖಿಸುತ್ತಾ, ಮಹಿಳೆಯ ಲೈಂಗಿಕಾಸಕ್ತಿಯನ್ನು ಸಮ್ಮತಿ ಎಂದು ಪರಿಭಾವಿಸಲಾಗದು. ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಲೈಂಗಿಕ ಆಸಕ್ತಿ ಸಮಾನವಾಗಿದ್ದಾಗ ಮಿಲನಕ್ಕೆ ಮಹಿಳೆಯ ಸಮ್ಮತಿ ಬೇಕಾಗುವುದಿಲ್ಲ. ಆದರೆ, ಲೈಂಗಿಕ ಆಸಕ್ತಿ ಅಸಮಾನವಾಗಿದ್ದಾಗ, ಅದನ್ನು ಸಮ್ಮತಿಗೆ ಸಮೀಕರಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಸಹಾಯಕತೆಗೆ ಒಳಗಾಗಿ ಮಹಿಳೆ ಮಿಲನಕ್ಕೆ ಒಪ್ಪಿದರೆ ಅದನ್ನು ಅತ್ಯಾಚಾರ ಎಸಗಲು ಆಕೆ ಸಮ್ಮತಿಸಿದ್ದಾಳೆ ಎಂದೇ ಅರ್ಥ ಎಂದು ಹೇಳಲಾಗುವುದಿಲ್ಲ. 1958 ಮತ್ತು 2003ರಲ್ಲಿ ಸುಪ್ರೀಂಕೋರ್ಟ್ ನ ತೀರ್ಪುಗಳನ್ನು (ರಾವ್ ಹರನಾರಾಯಣ್ ಸಿಂಗ್ ಶೇವೋಜಿ ಸಿಂಗ್ V/s ಸ್ಟೇಟ್ ಮತ್ತು ಉದಯ್ V/s ಕರ್ನಾಟಕ ರಾಜ್ಯ) ಉಲ್ಲೇಖಿಸಿ ಈ ಮಾತುಗಳನ್ನು ಹೇಳಿದ್ದಾರೆ.
ಏನಿದು ಪ್ರಕರಣ: ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯೊಬ್ಬರು ಪುರಷನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಳು. ಇದರ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಮಹಿಳೆಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪುರುಷ ಕೇರಳ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಮೊದಲ ಮಿಲನ ಬಳಿಕ ಮಹಿಳೆ ಪದೇಪದೆ ನನ್ನ ಮನೆಗೆ ಬಂದು ದೈಹಿಕ ಸಂಪರ್ಕಕ್ಕೆ ಸಹಕರಿಸಿದ್ದಳು. ಆಕೆಯ ಸಮ್ಮತಿಯೊಂದಿಗೇ ಮಿಲನ ನಡೆದಿತ್ತು. ಆದ್ದರಿಂದ ಅದು ಅತ್ಯಾಚಾರವಲ್ಲ ಎಂದು ಹೇಳಿದ್ದ.
ಆದರೆ, ತನ್ನ ತಾಯಿ ಮತ್ತು ಸಹೋದರಿಗೆ ಪುರುಷ ಹಾನಿಯುಂಟು ಮಾಡಬಹುದು ಎಂಬ ಭಯದಲ್ಲಿ ತಾನು ದೈಹಿಕ ಸಂಪರ್ಕಕ್ಕೆ ಸಹಕರಿಸಿದ್ದಾಗಿ ಹೇಳಿದ್ದಳು. ಆಕೆಯ ಈ ಹೇಳಿಕೆಯನ್ನು ಆಧರಿಸಿ ಹೈಕೋರ್ಟ್ ಅತ್ಯಾಚಾರ ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನೇ ಕೊಟ್ಟಿದೆ.