ನ್ಯೂಸ್

ವಾಂತಿ ಮಾಡಲೆಂದು ಬಸ್ಸಿನ ಕಿಟಕಿಯಲ್ಲಿ ತಲೆ ಹಾಕಿದ ಬೆನ್ನಲ್ಲೇ ತುಂಡಾಗಿ ಬಿತ್ತು ಬಾಲಕಿಯ ರುಂಡ!

ಭೋಪಾಲ್​: ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮಾರ್ಗ ಮಧ್ಯೆ ಕೆಲವರು ವಾಂತಿ ಮಾಡುವುದು ಸಾಮಾನ್ಯ. ಹೀಗಾಗಿ ಅನೇಕರು ಕಿಟಕಿ ಪಕ್ಕದ ಸೀಟನ್ನೇ ಕೇಳುತ್ತಾರೆ. ಏಕೆಂದರೆ, ವಾಂತಿ ಮಾಡಲು ಸುಲಭ ಆಗಲೆಂದು.

ಆದರೆ, ಕಿಟಕಿಯಿಂದ ಹೊರಗೆ ತಲೆ ಹಾಕಿ ವಾಂತಿ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಸ್ವಲ್ಪ ಮೈಮರೆತರೆ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

ಮಧ್ಯಪ್ರದೇಶದ ಖಾಂದ್ವಾ ಪ್ರದೇಶದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ 11 ವರ್ಷದ ಬಾಲಕಿ ವಾಂತಿ ಮಾಡಲೆಂದು ಬಸ್​ನಿಂದ ತಲೆಯನ್ನು ಹೊರಹಾಕಿದಾಗ ಅದೇ ಸಮಯದಲ್ಲಿ ಬಂದ ಟ್ರಕ್ ಬಾಲಕಿಯ ತಲೆಯನ್ನು ಗುದ್ದಿಕೊಂಡು ಹೋಗಿದೆ. ಇದರ ಪರಿಣಾಮ ತಲೆ ತುಂಡಾಗಿ ಬಾಲಕಿ ಮೃತಪಟ್ಟಿದ್ದಾಳೆ.

ಮೃತ ಬಾಲಕಿಯ ಹೆಸರು ತಮನ್ನಾ. ತನ್ನ ಕುಟುಂಬದೊಂದಿಗೆ ಬಾಲಕಿ ಬರ್ವಾಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಸುಮಾರು 9.30ರ ಸುಮಾರಿಗೆ ಖಾಂದ್ವಾ-ಇಂದೋರ್​ ಹೆದ್ದಾರಿಯ ನಡುವೆ ಬರುವ ರೊಸಿಯಾ ಫತಾ ಗ್ರಾಮದಲ್ಲಿ ತಮನ್ನಾಗೆ ವಾಕರಿಕೆ ಬಂದಿದೆ. ತಕ್ಷಣ ಆಕೆ ತನ್ನ ತಲೆಯನ್ನು ಬಸ್ಸಿನ ಕಿಟಕಿಯಿಂದ ಹೊರಹಾಕಿದ್ದಾಳೆ.

ಅದೇ ಸಮಯದಲ್ಲಿ ಬಂದು ಟ್ರಕ್​ ಬಾಲಕಿಯ ತಲೆಯನ್ನು ಕತ್ತರಿಸಿಕೊಂಡು ಹೋಗಿದೆ. ಭಯಾನಕ ಘಟನೆಯನ್ನು ಕಣ್ಣೆದುರಲ್ಲೇ ನೋಡಿದ ಕುಟುಂಬ ಆಘಾತಕ್ಕೆ ಒಳಗಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟ್ರಕ್​ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)