ನ್ಯೂಸ್

ಲೈವ್​ನಲ್ಲಿದ್ರು ಡಾಕ್ಟರ್- ರೈಲ್ವೇ ಪ್ಲಾಟ್​ಫಾರಂನಲ್ಲೇ ಡೆಲಿವರಿ ಮಾಡಿಸಿದ್ರು ಸಬ್​ ಇನ್​ಸ್ಪೆಕ್ಟರ್!

ಲಖನೌ: ಗೋವಾ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಣಿಯೋರ್ವಳಿಗೆ ಝಾನ್ಸಿ ರೈಲ್ವೆ ನಿಲ್ದಾಣ ತಲುಪಿದಾಗ ಪ್ರಸವ ವೇದನೆ ಕಾಣಿಸಿಕೊಂಡಿದೆ. ರೈಲ್ವೆ ಫ್ಲಾಟ್​ಫಾರಂಗೆ ಇಳಿದು ಯಾರದಾದರೂ ನೆರವು ಸಿಕ್ಕೀತೆ ಎಂದು ಸುತ್ತ ನೋಡುತ್ತಿದ್ದಾಗ ಮಹಿಳೆಯ ಪತಿಗೆ ಲೇಡಿ ಸಬ್​ ಇನ್​​ಸ್ಪೆಕ್ಟರ್ ಕಾಣಿಸಿದ್ರು. ಕೂಡಲೇ ನೆರವಿಗೆ ಧಾವಿಸಿದ ಅವರು ಆ ಮಹಿಳೆಯ ಡೆಲಿವರಿಯನ್ನು ಅಲ್ಲೇ ಸ್ವತಃ ಮಾಡಿಸಿದ್ರು!

ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿತ್ತು. ರೈಲ್ವೆ ಪ್ರೊಟೆಕ್ಷನ್ ಫೋರ್ಸ್​ನ ಸಬ್​ ಇನ್​ಸ್ಪೆಕ್ಟರ್ ರಾಜ್ ಕುಮಾರಿ ಗುಜ್ಜರ್​ ಡೆಲಿವರಿ ಮಾಡಿಸಿದವರು. ಮಗುವನ್ನು ಪ್ರಸವಿಸಿದ ಮಹಿಳೆಯ ಹೆಸರು ಪೂಜಾ ಕುಮಾರ್(20). ಆಕೆಯ ಪತಿ ಬಾದ್​ಷಾ.

ಘಟನೆ ಹೀಗಾಯಿತು: ಗೋವಾ ಎಕ್ಸ್​ಪ್ರೆಸ್​ನಲ್ಲಿ ಅವರು ಪ್ರಯಾಣಿಸುತ್ತಿದ್ದಾಗ ಪೂಜಾಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಕೂಡಲೇ ಬಾದ್​ಷಾ ಮತ್ತು ಪೂಜಾ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾರೆ. ಆದರೆ, ಅಲ್ಲಿಂದ ಆಸ್ಪತ್ರೆಗೆ ಹೋಗುವ ವ್ಯವಧಾನ ಇರಲಿಲ್ಲ. ಈ ಸಂದರ್ಭದಲ್ಲಿ ನೆರವಿಗೆ ಬಂದವರು ರಾಜ್ ಕುಮಾರಿ ಗುಜ್ಜರ್​. ಅವರು ತಮ್ಮ ಸ್ನೇಹಿತೆ ಡಾಕ್ಟರ್ ನೀಲು ಕಸೋತಿಯಾಗೆ ವಿಡಿಯೋ ಕರೆ ಮಾಡಿದ್ರು. ಅವರ ಸಲಹೆ ಮೇರೆಗೆ ರೈಲ್ವೆ ಎಸಿ ಬೋಗಿಯಿಂದಲೇ ಬೆಡ್​ ಶೀಟ್ ತರಿಸಿಕೊಂಡು ಸುಮಾರು ಒಂದು ಗಂಟೆ ಅವಧಿಯಲ್ಲಿ ಪೂಜಾಳ ಪ್ರಸವ ಮಾಡಿಸಿದ್ರು.

ಪೂಜಾಗೆ ಹೆಣ್ಣು ಮಗುವಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಅವರನ್ನು ಆನಂತರ ಸ್ಥಳೀಯ ಆಸ್ಪತ್ರೆಗೆ ಹೆಚ್ಚಿನ ಆರೈಕೆಗಾಗಿ ದಾಖಲಿಸಲಾಗಿದೆ. ಅವರು ನೆರವಿಗೆ ಬಾರದೇ ಇರುತ್ತಿದ್ದರೆ ತಾಯಿ ಮತ್ತು ಮಗುವನ್ನು ನಾನು ಕಳೆದುಕೊಳ್ಳುತ್ತಿದ್ದೆ ಎಂದು ಭಾವುಕರಾಗಿ ನುಡಿಯುತ್ತಿದ್ದಾರೆ ಬಾದ್​ಷಾ. (ಏಜೆನ್ಸೀಸ್)