ನ್ಯೂಸ್

ಕಾಬುಲ್​ನಿಂದ ಗಡಿಯತ್ತ ಅಫ್ಘನ್ನರ ದೌಡು: ದೇಶ ತೊರೆಯಲು ಹರಸಾಹಸ

ಕಾಬುಲ್: ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸೇನೆಗಳು ಅಫ್ಘನ್ ತೊರೆದ ಬೆನ್ನಿಗೆ ಸರ್ಕಾರ ರಚನೆಯ ಕೆಲಸಕ್ಕೆ ತಾಲಿಬಾನ್ ವೇಗ ನೀಡಿದೆ. ಇನ್ನೆರಡು ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ವಿಮಾನ ನಿಲ್ದಾಣದ ಸುತ್ತ ಜಮಾಯಿಸಿದ್ದ ಹತಾಶ ಅಪ್ಘನ್ನರು ಈಗ ಗಡಿಭಾಗದ ಕಡೆಗೆ ಹೆಜ್ಜೆ ಹಾಕಿದ್ದಾರೆ.

ವಿಮಾನ ನಿಲ್ದಾಣ ಸಂಪೂರ್ಣವಾಗಿ ತಾಲಿಬ್​ಗಳ ವಶವಾದ ಬಳಿಕ ಅಲ್ಲಿದ್ದ ಭಯಭೀತ ಜನರು ಗಡಿಭಾಗದಲ್ಲಿ ಜಮಾಯಿಸಿದ್ದಾರೆ. ಎಲ್ಲರೂ ಅಮೆರಿಕ ಮತ್ತು ಇತರೆ ದೇಶಗಳ ಸೇನಾ ವಿಮಾನದ ಮೂಲಕ ವಿದೇಶಗಳಿಗೆ ತೆರಳಲು ಸಿದ್ಧರಾಗಿ ವಿಮಾನ ನಿಲ್ದಾಣದ ಸುತ್ತ ನೆರೆದಿದ್ದರು. ಆದರೆ, ಅದು ಸಾಧ್ಯವಾಗದ ಕಾರಣ, ಈಗ ಪಾಕಿಸ್ತಾನ, ತಜಕಿಸ್ತಾನಗಳತ್ತ ತೆರಳುವುದಕ್ಕಾಗಿ ಗಡಿಯಲ್ಲಿ ಎಲ್ಲರೂ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜೀವ ಭಯದಿಂದ ಅಫ್ಘನ್ ಬಿಡಲು ಉದ್ದೇಶಿಸಿರುವ ಎಲ್ಲರನ್ನೂ ಮುಕ್ತವಾಗಿ ಅವರಿಗೆ ಸುರಕ್ಷಿತವೆನಿಸುವ ದೇಶಗಳಿಗೆ ತೆರಳುವುದಕ್ಕೆ ತಾಲಿಬಾನ್ ಆಡಳಿತ ಅವಕಾಶ ನೀಡಬೇಕು ಎಂದು ಕತಾರ್ ಸರ್ಕಾರ ಬುಧವಾರ ಆಗ್ರಹಿಸಿದೆ. ಅಮೆರಿಕ ಮತ್ತು ತಾಲಿಬಾನ್ ನಡುವೆ ಮಧ್ಯಸ್ಥಿಕೆದಾರನಾಗಿ ಕತಾರ್ ಕೆಲಸ ಮಾಡಿತ್ತು.

ಹೇಳಿಕೆಗೂ, ಕೃತ್ಯಕ್ಕೂ ತಾಳೆ ಇಲ್ಲ: ಸುಧಾರಣಾವಾದಿಗಳಂತೆ ತಾಲಿಬಾನ್ ನಾಯಕರು ಪೋಸ್ ನೀಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವರ ಹೇಳಿಕೆಗಳಿಗೂ ಕೃತ್ಯಗಳಿಗೂ ತಾಳೆಯಾಗುತ್ತಿಲ್ಲ. ತಾಲಿಬ್​ಗಳು ಕಳೆದ 15 ದಿನಗಳ ಅವಧಿಯಲ್ಲಿ ಕಲಾವಿದರು, ಹೋರಾಟಗಾರರು, ಮಹಿಳೆಯರನ್ನು ಚಿತ್ರಹಿಂಸೆ ನೀಡಿ ಹತ್ಯೆಮಾಡಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಫ್ಘನ್ನರನ್ನು ಅವರ ವೃತ್ತಿಯನ್ನು ಆಧರಿಸಿ ವಿಂಗಡಿಸಿದ್ದು, ಮನೆ ಮನೆ ಶೋಧಿಸಿ ಅಮೆರಿಕಕ್ಕೆ ಮತ್ತು ವಿದೇಶೀಯರಿಗೆ ನೆರವು ನೀಡಿದವರನ್ನು ಹತ್ಯೆ ಮಾಡುತ್ತಿದ್ದಾರೆ.

ಕತಾರ್​ನಿಂದ ತಾಂತ್ರಿಕ ನೆರವು: ಕಾಬುಲ್ ವಿಮಾನ ನಿಲ್ದಾಣವನ್ನು ಮತ್ತೆ ವಾಣಿಜ್ಯ ಬಳಕೆಗೆ ಸಿದ್ಧಗೊಳಿಸು ವುದಕ್ಕಾಗಿ ಕತಾರ್​ನಿಂದ ತಾಂತ್ರಿಕ ತಂಡ ಒಂದನ್ನು ತಾಲಿಬಾನ್ ಕರೆ ಯಿಸಿಕೊಂಡಿದೆ. ಕತಾರ್ ವಿಮಾನದಲ್ಲಿ ಆಗಮಿಸಿ, ಕಾಬುಲ್​ನಲ್ಲಿ ಇಳಿದ ಈ ತಂಡ ಕೆಲಸ ಶುರುಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

# ಭಾರತದಲ್ಲಿ ವಿವಿಧ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿ 25 ಉಗ್ರರು ಅಫ್ಘನ್​ನಲ್ಲಿ ತಲೆಮರೆಸಿಕೊಂಡಿದ್ದಾರೆ. ಅಫ್ಘನ್ ಮತ್ತು ಪಾಕ್ ಗಡಿಭಾಗದಲ್ಲಿ ಈ ಉಗ್ರರು ನೆಲೆಸಿದ್ದಾರೆ. ಇವರಲ್ಲಿ ಬಹುತೇಕರು ಕೇರಳ ಮೂಲದವರು. ಇವರೆಲ್ಲರನ್ನು ತಾಲಿಬಾನ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಮಾಡಿತ್ತು.

# ಅಫ್ಘನ್ ನೆಲದ ಮೇಲೆ ಅಗತ್ಯ ಬಿದ್ದರೆ ಡ್ರೋನ್ ದಾಳಿ ನಡೆಸುವುದಕ್ಕೆ ಅಮೆರಿಕ ಹಿಂದೇಟು ಹಾಕದು. ಉಗ್ರರ ನೆಲೆವೀಡಾಗಿರುವ ಅಫ್ಘನ್, ಅವರನ್ನು ಮಟ್ಟಹಾಕದೇ ಹೋದರೆ ಡ್ರೋನ್ ದಾಳಿ ಅನಿವಾರ್ಯವಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಭಾರತದ ಅಧ್ಯಕ್ಷತೆ ಮುಕ್ತಾಯ

ಜಾಗತಿಕ ಮಟ್ಟದಲ್ಲಿ ಅಫ್ಘನ್​ನಿಂದ ಅಮೆರಿಕ ಸೇನೆ ಹಿಂಪಡೆಯುತ್ತಿದ್ದಂತೆ ಪ್ರಮುಖ ವಿದ್ಯಮಾನ ನಡೆಯುತ್ತಿದ್ದ ಆಗಸ್ಟ್ ತಿಂಗಳಲ್ಲೇ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಧ್ಯಕ್ಷತೆ ಕೂಡಿಬಂದಿತ್ತು. ಒಂದು ತಿಂಗಳ ಅವಧಿಯಲ್ಲಿ ಭಾರತ ಅದನ್ನು ಸಮರ್ಥವಾಗಿ ನಿರ್ವಹಿಸಿದೆ. ಅಫ್ಘನ್ ಸಂಬಂಧಿಸಿದ ಹಲವು ಸಭೆಗಳನ್ನು ನಡೆಸಿದ್ದಲ್ಲದೆ, ಕೊನೆಯದಾಗಿ ಅಫ್ಘನ್ ವಿಚಾರದಲ್ಲಿ ಕಠಿಣ ನಿರ್ಣಯವನ್ನೂ ಮಂಡಿಸಿ ಅಂಗೀಕಾರವಾಗುವಂತೆ ನೋಡಿಕೊಂಡಿತ್ತು. ಇದಕ್ಕೆ ಚೀನಾ ಮತ್ತು ರಷ್ಯಾ ಪ್ರತಿನಿಧಿಗಳು ಗೈರಾಗಿದ್ದರು.

ಕಾಶ್ಮೀರದಲ್ಲಿ ಹಸ್ತಕ್ಷೇಪವಿಲ್ಲ

ಪಾಕಿಸ್ತಾನ ಸೇನೆ ಮತ್ತು ಐಎಸ್​ಐ ಜತೆಗೆ ಸಂಪರ್ಕ ಮತ್ತು ನಿಕಟತೆ ಇದೆ. ಆದರೆ, ನಾವೆಂದೂ ಪಾಕಿಸ್ತಾನದ ಅಸ್ತ್ರವಾಗಿ ಬಳಕೆಯಾಗಿಲ್ಲ. ಕಾಶ್ಮೀರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿ ನಮ್ಮ ಹಸ್ತಕ್ಷೇಪವೂ ಇರಲ್ಲ. ಹಕ್ಕಾನಿ ನೆಟ್​ವರ್ಕ್ ಎಂಬುದು ಜನರ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಜಗತ್ತಿನಾದ್ಯಂತ ವಿಶೇಷವಾಗಿ ಭಾರತದಲ್ಲಿ ಮಾಧ್ಯಮಗಳು ನಮ್ಮ ವಿರುದ್ಧ ನೆಗೆಟಿವ್ ವರದಿ ಮಾಡುತ್ತಿವೆ. ನಾವು ಜೆಇಎಂ ಅಥವಾ ಎಲ್​ಇಟಿಗಳಿಗೆ ಕಾಶ್ಮೀರದ ವಿಚಾರದಲ್ಲಿ ಬೆಂಬಲ ನೀಡುತ್ತಿಲ್ಲ. ನಮಗೆ ಎಲ್ಲರ ಬೆಂಬಲವೂ ಬೇಕು. ರಾಜತಾಂತ್ರಿಕವಾಗಿ ಮುಂದುವರಿಯಲು ಇಚ್ಛಿಸಿದ್ದೇವೆ ಎಂದು ಹಕ್ಕಾನಿ ನೆಟ್​ವರ್ಕ್​ನ ನಾಯಕ ಅನಾಸ್ ಹಕ್ಕಾನಿ ಹೇಳಿದ್ದಾನೆ.

ರಕ್ಷಣೆಗಾಗಿ ಬೈಡೆನ್​ಗೆ ಮೊರೆ

ಅಫ್ಘಾನಿಸ್ತಾನದಲ್ಲಿ 13 ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ಗೆ ನೆರವು ನೀಡಿದ್ದ ಮೊಹಮ್ಮದ್ ಎಂಬ ವ್ಯಕ್ತಿ ವಾಲ್ ಸ್ಟ್ರೀಟ್ ಜರ್ನಲ್ ಜತೆ ಮಾತನಾಡಿದ್ದು, ‘ನನ್ನನ್ನೂ ನನ್ನ ಕುಟುಂಬವನ್ನು ಬಚಾವ್ ಮಾಡಿ ಮಿಸ್ಟರ್ ಪ್ರೆಸಿಡೆಂಟ್’ ಎಂದು ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ. 2008ರಲ್ಲಿ ಸೆನೆಟರ್ ಆಗಿದ್ದ ಜೋ ಬೈಡೆನ್ ಮತ್ತು ಇತರರು ಇದ್ದ ಹೆಲಿಕಾಪ್ಟರ್​ಗಳು ತುರ್ತಾಗಿ ಅಫ್ಘನ್​ನ ಹಿಂದುಳಿದ ಕಣಿವೆ ಪ್ರದೇಶದಲ್ಲಿ ಇಳಿದಿದ್ದವು. ಆಗ, ಸ್ಥಳೀಯವಾಗಿ ಭಾಷಾಂತರಕಾರನಾಗಿ ಮೊಹಮ್ಮದ್ ಅವರನ್ನು ಬಚಾವ್ ಮಾಡಲು ನೆರವಾಗಿದ್ದ. ಈತ ಈಗ ತಾಲಿಬ್​ಗಳ ಹಿಟ್​ಲಿಸ್ಟ್ನಲ್ಲಿದ್ದು ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಅಡಗುದಾಣ ಸೇರಿದ್ದಾನೆ. ಅಲ್ಲಿಂದ ಅವರನ್ನು ಬಚಾವ್ ಮಾಡುವುದಕ್ಕೆ ಅಮೆರಿಕ ಕೂಡ ಕ್ರಮ ತೆಗೆದುಕೊಂಡಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಸದ್ಯದಲ್ಲೇ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ

ಅಫ್ಘಾನಿಸ್ತಾನದಲ್ಲಿ ಶುಕ್ರವಾರದ ವೇಳೆಗೆ ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ತಾಲಿಬಾನ್ ರಚಿಸಲಿದೆ. ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘನ್ ಸರ್ಕಾರ ಇದಾಗಿರಲಿದ್ದು, ಇದರಲ್ಲಿ ಎಲ್ಲರಿಗೂ ಪ್ರಾತಿನಿಧ್ಯ ಇರಲಿದೆ ಎಂದು ತಾಲಿಬಾನ್ ರಾಜಕೀಯ ನೇತಾರ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್​ರೆೈ ಬುಧವಾರ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಮುಖ ಸಚಿವ ಸ್ಥಾನಗಳಿಗೆ ತಾಲಿಬಾನ್ ಮತ್ತು ಹಕ್ಕಾನಿ ನಾಯಕತ್ವದ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಖಾತೆ ಹಂಚಿಕೆ ವಿಚಾರದಲ್ಲಿ ಮುಲ್ಲಾ ಯಾಕೂಬ್ ಮತ್ತು ಹಕ್ಕಾನಿ ಬಣಗಳ ನಡುವೆ ಭಿನ್ನಮತ ಏರ್ಪಟ್ಟಿದೆ. ಮೊದಲ ಅಮಿರ್-ಉಲ್-ಮೊಮೀನ್ ಮುಲ್ಲಾ ಒಮರ್​ನ ಪುತ್ರ ಯಾಕೂಬ್ ಹೊಸ ಸಚಿವ ಸಂಪುಟದಲ್ಲಿ ರಾಜಕೀಯ ನಾಯಕತ್ವದ ಬದಲು ಸೇನಾ ನಾಯಕತ್ವ ಬಯಸಿದ್ದಾನೆ. ಇದೇ ವೇಳೆ, ತಾಲಿಬಾನ್ ನಾಯಕ ಸುನ್ನಿ ಇಸ್ಲಾಮಿಸ್ಟ್ ಗ್ರೂಪ್​ನ ಸಹ ಸಂಸ್ಥಾಪಕ ಮುಲ್ಲಾ ಬರಾದರ್ ಕೂಡ ಸೇನೆಯ ನಾಯಕತ್ವದ ಮೇಲೆ ಕಣ್ಣಿರಿಸಿದ್ದಾನೆ. ದೋಹಾದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದವರು ಮತ್ತು ಅಮೆರಿಕ ನೇತೃತ್ವದ ಪಡೆಗಳೊಂದಿಗೆ ಅಸ್ಕರಿ ಜಿಹಾದ್ ನಡೆಸಿದವರು ಸರ್ಕಾರ ರಚನೆಯ ಚೌಕಟ್ಟು ರೂಪಿಸಬಾರದು ಎಂಬುದು ಯಾಕೂಬ್ ನಿಲುವು. ಇದು ಮುಲ್ಲಾ ಬರದಾರ್ ಮತ್ತು ಶೇರ್ ಮೊಹಮ್ಮದ್ ಸ್ಟಾಕ್​ರೆೈ ವಿರುದ್ಧ ಪರೋಕ್ಷ ಸಮರವಾಗಿ ರೂಪುಗೊಂಡಿದೆ. ಈ ಎಲ್ಲ ವಿದ್ಯಮಾನಗಳ ಕಾರಣ, ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರ ಈಗ ಬಹಳ ಸವಾಲಾಗಿ ಪರಿಣಮಿಸಿದೆ.

ಯಾರು ಎಲ್ಲಿ ಪ್ರಬಲರು?

ಅಫ್ಘನ್ ರಾಜಧಾನಿ ಕಾಬುಲ್​ನಲ್ಲಿ ಹಕ್ಕಾನಿ ನೆಟ್​ವರ್ಕ್ ಪ್ರಾಬಲ್ಯವಿದೆ. ಈ ಶಕ್ತಿ ಕೇಂದ್ರ ಹಕ್ಕಾನಿ ಉಗ್ರರ ನಿಯಂತ್ರಣದಲ್ಲಿದೆ. ಕಂದಹಾರ್​ನಲ್ಲಿ ಮುಲ್ಲಾ ಯಾಕೂಬ್​ದೇ ಕಾರುಬಾರು. ಬದಲಾದ ಸನ್ನಿವೇಶದಲ್ಲಿ ಅಫ್ಘನ್​ನ ಶಕ್ತಿಕೇಂದ್ರವಾಗಿ ಕಂದಹಾರ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ತಾಲಿಬಾನ್ ಸರ್ಕಾರದಲ್ಲಿ ಕಂದಹಾರಿಗಳ ಅಫ್ಘನ್ ಪರ ಬಣ ಮತ್ತು ಹಕ್ಕಾನಿಗಳ ಪಾಕ್ ಪರ ಬಣಗಳ ಪ್ರಭಾವ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ಸಚಿವ ಸಂಪುಟದ ಸ್ವರೂಪ

ತಾಲಿಬಾನ್​ನ ಸುಪ್ರೀಂ ನಾಯಕ ಹಿಬತುಲ್ಲಾಹ್ ಅಖುಂಡ್​ರೆದಾ ಸರ್ಕಾರದ ಮುಖ್ಯಸ್ಥರಾಗಿರಲಿದ್ದಾರೆ. ಅಖುಂಡ್​ರೆದಾ ಇದು ವರೆಗೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಸಚಿವ ಸಂಪುಟದಲ್ಲಿ 11ರಿಂದ 72 ಸಚಿವರು ಇರಲಿದ್ದಾರೆ. ಅಖುಂಡ್​ರೆದಾ ಕಂದಹಾರ್​ನ ನಿವಾಸಿಯಾಗಿದ್ದು, ಅಲ್ಲಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ.

350 ತಾಲಿಬ್​ಗಳ ಹತ್ಯೆ

ಪಂಜ್​ಶೀರ್ ಪ್ರಾಂತ್ಯದ ಮೇಲೆ ಸಮರಕ್ಕೆ ಬಂದ ತಾಲಿಬಾನಿಗಳ ಪೈಕಿ 350 ತಾಲಿಬಾನಿಗಳು ಹತರಾಗಿದ್ದಾರೆ. 40ಕ್ಕೂ ಹೆಚ್ಚು ತಾಲಿಬಾನಿಗಳನ್ನು ಬಂಧಿಸಿ, ಸೆರೆಯಲ್ಲಿ ಇರಿಸಲಾಗಿದೆ. ಕವಾಕ್​ನಲ್ಲಿ ಮಂಗಳವಾರ ತಡರಾತ್ರಿ ಈ ಸಮರ ನಡೆದಿತ್ತು. ತಾಲಿಬಾನಿಗಳು ತಂದಿದ್ದ ಅಮೆರಿಕದ ಹೊಸ ಸೇನಾ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ನಾರ್ದರ್ನ್ ಅಲಯನ್ಸ್ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಕಮಾಂಡರ್ ಮುನಿಬ್ ಅಮಿರಿ ಹೇಳಿದ್ದಾನೆ.

ಬೈಡೆನ್​ಗೆ ಕೊನೆಯ ಕರೆ ಮಾಡಿದ್ದ ಘನಿ

ತಾಲಿಬಾನಿಗಳು ಕಾಬುಲ್​ಗೆ ನುಗ್ಗುವುದಕ್ಕೆ ಶುರುಮಾಡಿದ ವೇಳೆ, ಅಫ್ಘನ್ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕರೆ ಮಾಡಿದ್ದರು. ಜುಲೈ 23ರಂದು ಈ ಫೋನ್ ಸಂಭಾಷಣೆ ನಡೆದಿದ್ದು, ಉಭಯ ನಾಯಕರು 14 ನಿಮಿಷ ಮಾತುಕತೆ ನಡೆಸಿದ್ದರು. ಎಲ್ಲವೂ ವಿಫಲವಾದ ಬಳಿಕ ಆಗಸ್ಟ್ 14ರಂದು ತಡರಾತ್ರಿ ಘನಿ ಕಾಬುಲ್​ನಲ್ಲಿರುವ ಅಧ್ಯಕ್ಷೀಯ ಬಂಗಲೆ ಬಿಟ್ಟು ಪರಾರಿಯಾಗಿದ್ದರು.

ಅಫ್ಘನ್ನರಿಗೆ ಆಹಾರದ ಕೊರತೆ

ಅಫ್ಘನ್ನರು ಈ ತಿಂಗಳು ಮುಗಿಯುತ್ತಿದ್ದಂತೆ ಆಹಾರದ ತೀವ್ರ ಕೊರತೆಯನ್ನು ಎದುರಿಸಲಿದ್ದಾರೆ. ತಾಲಿಬಾನ್ ಆಡಳಿತಕ್ಕೆ ಇದು ಬಹುದೊಡ್ಡ ಸವಾಲಾಗಿ ಕಾಡಲಿದೆ. ಎರಡು ದಶಕಗಳ ಸಮರದ ನಂತರ ಅಫ್ಘನ್​ನಲ್ಲಿ ಸ್ಥಿರತೆ ತರುವುದಕ್ಕೆ ತಾಲಿಬಾನ್ ಪ್ರಯತ್ನಿಸಬೇಕಾಗಿದೆ. ಅದರ ನಡುವೆ, ದೇಶದ 3.8 ಕೋಟಿ ಜನರ ಪೈಕಿ ಮೂರನೇ ಒಂದಂಶ ಜನರು ತೀವ್ರತರದ ಆಹಾರದ ಕೊರತೆಯನ್ನು ಈಗಾಗಲೇ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಸ್ಥಳೀಯ ಮಾನವೀಯ ಸಮನ್ವಯಕಾರ ರಮೀಜ್ ಅಲಕ್​ಬರೋವ್ ಎಚ್ಚರಿಸಿದ್ದಾರೆ.

ಪಂಜ್​ಶೀರ್ ಸಂಧಾನ ಮಾತುಕತೆ ವಿಫಲ

ಪಂಜ್​ಶೀರ್ ಪ್ರಾಂತ್ಯದ ನಾಯಕರೊಂದಿಗೆ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ ಎಂದು ತಾಲಿಬಾನ್ ಘೋಷಿಸಿದೆ. ಪಂಜ್​ಶೀರ್ ಜನರು ಸ್ವತಂತ್ರರಾಗಿ ಇರಲು ಬಯಸಿದ್ದು, ಸಮರ ಸಾರಿದ್ದಾರೆ. ಇದರ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂದು ತಾಲಿಬಾನ್​ನ ಕಮಿಷನ್ ಫಾರ್ ಗೈಡೆನ್ಸ್ ಆಂಡ್ ಎನ್​ಕರೇಜ್​ವೆುಂಟ್ ಮುಖ್ಯಸ್ಥ ಮುಲ್ಲಾ ಆಮಿರ್ ಖಾನ್ ಮೊಟಾಖಿ ತಿಳಿಸಿದ್ದಾಗಿ ಖಾಮಾ ಪ್ರೆಸ್ ವರದಿ ಮಾಡಿದೆ.

ಪತ್ರಕರ್ತೆಯರ ಸಂಖ್ಯೆ ಇಳಿಕೆ

ಕಾಬುಲ್ ತಾಲಿಬಾನ್ ವಶವಾದ ಬಳಿಕ ಅಲ್ಲಿದ್ದ 700ಕ್ಕೂ ಹೆಚ್ಚು ಪತ್ರಕರ್ತೆಯರ ಪೈಕಿ ಈಗ ಉಳಿದುಕೊಂಡಿರುವವರ ಸಂಖ್ಯೆ 100ಕ್ಕೂ ಕಮ್ಮಿ. ಹೀಗೆ ಉಳಿದವರು ಬಹುತೇಕ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ರಿಪೋರ್ಟರ್ಸ್ ಸ್ಯಾನ್ಸ್ ಫ್ರಂಟೀಯರ್ಸ್ ಹೇಳಿದೆ.

ಉಯ್ಗರ್ ಮುಸ್ಲಿಮರಿಗೆ ಗಡಿಪಾರು ಭೀತಿ

ತಾಲಿಬಾನ್ ಆಳ್ವಿಕೆಯಲ್ಲಿ ಚೀನಾಕ್ಕೆ ಗಡಿಪಾರಾಗುವ ಭೀತಿಯನ್ನು ಉಯ್ಗರ್ ಮುಸ್ಲಿಮರು ಎದುರಿಸುತ್ತಿದ್ದಾರೆ. ತಾಲಿಬಾನಿಗಳು ಚೀನಾದ ಜತೆಗೆ ರಹಸ್ಯ ಮಾತುಕತೆ ನಡೆಸುತ್ತಿರುವ ಕಾರಣ ಉಯ್ಗರ್ ಮುಸ್ಲಿಮರಿಗೆ ಈ ಭೀತಿ, ಆತಂಕ ಎಂದು ಪಾಕಿಸ್ಥಾನ ಮೂಲದ ಉಮರ್ ಉಯ್ಗರ್ ಟ್ರಸ್ಟ್​ನ ಮುಖ್ಯಸ್ಥ ಮೊಹಮ್ಮದ್ ಉಮರ್ ತಿಳಿಸಿದ್ದಾನೆ.