ನ್ಯೂಸ್

ನಿಯಮ ಉಲ್ಲಂಘಿಸುವ ಮದ್ಯ ಮಾರಾಟ ಅಂಗಡಿ ವಿರುದ್ಧ ಕ್ರಮ


ಮಂಗಳೂರು: ನಗರದ ಕೆಲವು ಪ್ರಮುಖ ಸ್ಥಳಗಳಲ್ಲಿ ಮದ್ಯ ಮಾರಾಟದ ಅಂಗಡಿಗಳು ಬೆಳಗ್ಗೆ 5-6 ಗಂಟೆಗೆ ಬಾಗಿಲು ತೆರೆದು ವ್ಯಾಪಾರ ಶುರು ಮಾಡುತ್ತವೆ. ಇದು ಬಡ ಕೂಲಿ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರ ಮೇಲೆ ಗಂಭೀರ ದುಷ್ಪರಿಣಾಮ ಬೀಳುತ್ತಿದೆ. ಇದರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ಜರುಗಿದ ದಲಿತ ಕುಂದು ಕೊರತೆ ಸಭೆಯಲ್ಲಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರು ಪ್ರತಿಕ್ರಿಯಿಸಿ, ಈಗಾಗಲೇ ಹಲವು ಮದ್ಯ ಮಾರಾಟದ ಅಂಗಡಿಗಳಿಗೆ ದಂಡ ವಿಧಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದರೆ ಫೋಟೊ ತೆಗೆದು ಕಳುಹಿಸಿದರೆ ಕ್ರಮ ಜರುಗಿಸಲಾಗುವುದು ಎಂದರು.


ನಗರದ ಬಹುತೇಕ ಶಾಲೆ ವಠಾರದ ರಸ್ತೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ಶಾಲಾ ಆವರಣದೊಳಗೆ ಜಾಗವಿದ್ದರೂ, ವಾಹನಗಳನ್ನು ಒಳಗೆ ಬಿಡದಿರುವುದರಿಂದ ರಸ್ತೆಯಲ್ಲಿ ಸಾಗುವವರಿಗೆ ಸಮಸ್ಯೆಯಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಪ್ರಮುಖರು ಆಗ್ರಹಿಸಿದರು.ಉತ್ತರ ನೀಡಿದ ಪೊಲೀಸ್ ಉಪಾಯುಕ್ತ ದಿನೇಶ್ ಕುಮಾರ್ ಅವರು, ಸಂಬಂಧಪಟ್ಟ ಶಾಲೆಯವರಿಗೆ ವಾಹನಗಳನ್ನು ಆವರಣ, ಮೈದಾನದಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದರು.


ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಮರದಡಿಯಲ್ಲಿ ನಿಂತು ಮೊಬೈಲ್ ನೋಡಿಕೊಂಡು ಇರುತ್ತಾರೆ ಎನ್ನುವ ದಲಿತ ಮುಖಂಡರು ದೂರಿದರು. ಉತ್ತರಿಸಿದ ಆಯುಕ್ತರು, ಟ್ರಾಫಿಕ್ ಪೊಲೀಸರು ತಮಗೆ ಸಂಬಂಧಿಸಿದ ಠಾಣಾ ವ್ಯಾಪ್ತಿಯ ಜಂಕ್ಷನ್, ವಾಹನ ದಟ್ಟಣೆ ಪ್ರದೇಶದಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಈಗಾಗಲೇ ಈ ಕುರಿತು ಸೂಚನೆ ನೀಡಲಾಗಿದ್ದು, ಶೇ.95ರಷ್ಟು ಮಂದಿ ಠಾಣೆಯಿಂದ ಹೊರಗಿರಬೇಕು. ಇದರಿಂದ ಅಪಘಾತಗಳು ಉಂಟಾಗುವುದನ್ನು ತಡೆಯಲು ಸಾಧ್ಯವಿದೆ ಎಂದರು.


ಗಂಜಿಮಠದ ಗಣೇಶನಗರದ ಅಂಬೇಡ್ಕರ್ ಭವನದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಕಳ್ಳತನವಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಕೆಲಸ ಆಗಿಲ್ಲ ಎಂದು ದಸಂಸ ಮುಖಂಡ ಎಸ್.ಪಿ.ಆನಂದ ದೂರಿದರು. ಬಜಪೆ ಠಾಣಾಧಿಕಾರಿ ಉತ್ತರಿಸಿ ಮಾ.30ರಂದು ಎ್ಐಆರ್ ಆಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಪ್ರಗತಿಯಲ್ಲಿದೆ ಎಂದರು.


ನಗರದ ಅಂಬೇಡ್ಕರ್ ವೃತ್ತ ಅಭಿವೃದ್ಧಿ ವಿಳಂಬವಾಗಿದ್ದು, ಸ್ಮಾರ್ಟ್ ಸಿಟಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮುಖಂಡರಾದ ಚಂದ್ರ ಕುಮಾರ್ ಆಗ್ರಹಿಸಿದರು. ಸ್ಮಾರ್ಟ್ ಸಿಟಿ ಪ್ರಮುಖರೊಂದಿಗೆ ಈ ಕುರಿತು ಮಾತನಾಡಿ, ಶೀಘ್ರ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು ಎಂದು ದಿನೇಶ್ ಕುಮಾರ್ ಉತ್ತರಿಸಿದರು.


ಕಾನೂನು ಸುವ್ಯವಸ್ಥೆ ಡಿಸಿಪಿ ಅಂಶುಕುಮಾರ್, ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು. ದಲಿತ ಮುಖಂಡರಾದ ಎಸ್.ಪಿ.ಆನಂದ, ಚಂದ್ರ ಕುಮಾರ್, ಮುಕೇಶ್ ಕುಮಾರ್ ಕುಲಶೇಖರ, ರಮೇಶ್ ಎ. ಪಾಂಡೇಶ್ವರ, ಅಮಲ ಜ್ಯೋತಿ, ಅನಿಲ್ ಕುಮಾರ್, ಮಂಜುನಾಥ ಮೂಲ್ಕಿ ಮೊದಲಾದವರಿದ್ದರು.


ವಂಚನೆ ಪತ್ತೆ ಸವಾಲು
ಸಾರ್ವಜನಿಕರು ವಿವಿಧ ರೀತಿಯಲ್ಲಿ ಸೈಬರ್ ವಂಚನೆಗೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ಆದರೆ ಪ್ರಕರಣ ದಾಖಲಿಸಿದರೂ ಆರೋಪಿಗಳ ಪತ್ತೆ ಪೊಲೀಸ್ ಇಲಾಖೆಗೆ ಸವಾಲಾಗಿವೆ. 100ರಲ್ಲಿ 2 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಯಾವ ರಾಜ್ಯದಿಂದ ಕರೆ ಬರುತ್ತಿದೆ ಎಂದು ಪ್ರಕರಣವನ್ನು ಗ್ರೂಪ್ ಮಾಡಿ ಅಲ್ಲಿ ಹೋಗಿ ಈ ಕುರಿತು ಏನಾದರೂ ಸುಳಿವು ಸಿಗುತ್ತದೆಯೇ ಎಂದು ಪರಿಶೀಲಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಸೈಬರ್ ವಂಚನೆ ಕುರಿತಂತೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದರು.