ನ್ಯೂಸ್

ಒಂದು ಮತದಿಂದ ಗೆದ್ದರೂ ಅಂತಿಮವಾಗಿ ಅದು ಗೆಲುವೇ: ಸಿಎಂ ನಿತೀಶ್ ಕುಮಾರ್​ ತಿರುಗೇಟು​

ಪಟನಾ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ನಿತೀಶ್​ ಕುಮಾರ್​ ನೇತೃತ್ವದ ಜೆಡಿ(ಯು) ಪಕ್ಷ ಕಳಪೆ ಸಾಧನೆ ಮಾಡಿದ್ದರ ಕುರಿತು ಪ್ರತಿಪಕ್ಷಗಳ ಭಾರೀ ಟೀಕೆ ಮಾಡುತ್ತಿದ್ದು, ಈ ಬಗ್ಗೆ ಕಿಡಿಕಾರಿರುವ ನಿತೀಶ್​, ಒಂದು ಮತದಿಂದ ಗೆದ್ದರೂ ಅದು ಗೆಲುವೇ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಮತದ ಗೆಲುವು ಅಂತಿಮವಾಗಿ ಗೆಲುವೇ ಆಗಿರುತ್ತದೆ. ನಾವು 125 ಸ್ಥಾನಗಳನ್ನು ಹೊಂದಿದ್ದೇವೆ. 122 ಸ್ಥಾನಗಳನ್ನು ಹೊಂದಿರುವವರು ಸರ್ಕಾರ ರಚನೆ ಮಾಡಬಹುದು. ಚುನಾವಣೆಯಲ್ಲಿ ಏನಾದರೂ ಅಕ್ರಮ ನಡೆದಿದೆ ಎಂದು ಅನಿಸಿದರೆ, ಅವರು ನ್ಯಾಯಾಲಯದ ಮೊರೆ ಹೋಗಿ ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡುವ ಮೂಲಕ ತಿರುಗೇಟು ನೀಡಿದರು.

ಕಾಂಗ್ರೆಸ್​-ಆರ್​ಜೆಡಿ ಮಹಾಮೈತ್ರಿಗಿಂತ ಎನ್​ಡಿಎ ಕೇವಲ 12,270 ಮತಗಳು ಮತ್ತು ಹೆಚ್ಚಿನ 16 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯಶಾಲಿಯಾಗಿ ಹೊರಹೊಮ್ಮಿದೆ ಎಂದು ಪ್ರತಿಪಕ್ಷ ನಾಯಕ ಹಾಗೂ ಆರ್​ಜೆಡಿಯ ತೇಜಸ್ವಿ ಯಾದವ್​ ಹೇಳಿಕೆ ನೀಡಿದ ಬೆನ್ನಲ್ಲೇ ನಿತೀಶ್​ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಜೆಡಿಯು ಪಕ್ಷದ ವಿರುದ್ಧವೂ ಹರಿಹಾಯ್ದಿದ್ದ ತೇಜಸ್ವಿ ಯಾದವ್​, ನಿತೀಶ್​ ನೇತೃತ್ವದ ಪಕ್ಷವೂ 3ನೇ ಸ್ಥಾನಕ್ಕೆ ಕುಸಿಯುವ ಮೂಲಕ ಕಳಪೆ ಸಾಧನೆ ಮಾಡಿದೆ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿತೀಶ್​, ನೀವು ಜೀವನದಲ್ಲಿ ಏಳಿಗೆ ಕಾಣಬೇಕೆಂದರೆ ಸ್ವಲ್ಪ ಗೌರವ ಮತ್ತು ಘನತೆಯನ್ನು ನಿರ್ವಹಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆಂದು ತೇಜಸ್ವಿ ಯಾದವ್​ ಹೆಸರೇಳದೆ ನಿತೀಶ್​ ಮಾತಿನ ಮೂಲಕ ಕುಟುಕಿದ್ದಾರೆ. (ಏಜೆನ್ಸೀಸ್​)