ನ್ಯೂಸ್

ರಾಜಕಾಲುವೆ ಒತ್ತುವರಿ ತೆರವಿಗೆ ಬೇಕು ಇಚ್ಛಾಶಕ್ತಿ

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ನಗರದ ವಿವಿಧೆಡೆ ರಾಜಕಾಲುವೆ ಸ್ವಚ್ಛತೆ ಕಾರ್ಯಕ್ಕೆ ನಗರಸಭೆ ಚಾಲನೆ ನೀಡಿದ್ದು, ಇದರ ಜತೆಗೆ ಪಟ್ಟಣದ ವ್ಯಾಪ್ತಿಯಲ್ಲಿ ಕೆರೆ, ರಾಜ ಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಾದ ತುರ್ತು ಇದೆ ಎಂಬ ಅಭಿಪ್ರಾಯ ದಟ್ಟವಾಗಿದೆ.

ಜಿಲ್ಲೆಯಲ್ಲಿ ಹಿರಿಯೂರು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಬಡಾವಣೆಗಳ ವಿಸ್ತರಣೆ, ಕಾಂಕ್ರೀಟೀಕರಣ, ಅವೈಜ್ಞಾನಿಕ ಕಾಮಗಾರಿ, ಭೂ ಬಳಕೆ, ಅಕ್ರಮ ಲೇಔಟ್ ನಿರ್ಮಾಣದಿಂದ ನಗರದ ಕೆರೆ, ರಾಜಕಾಲುವೆಗಳ ಒತ್ತುವರಿ ಆಗಿದೆ.

ಹಿರಿಯೂರಿನಲ್ಲಿ ಎರಡು ಪ್ರಮುಖ ರಾಜಕಾಲುವೆ ಹಾದುಹೋಗಿವೆ. ದಶಕಗಳ ಹಿಂದೆ 15 ಅಡಿ ವಿಸ್ತೀರ್ಣವಿದ್ದ ರಾಜಕಾಲುವೆ ಪ್ರಸ್ತುತ 2 ರಿಂದ 3 ಅಡಿಗೆ ಇಳಿದಿದೆ. ಕೆಲವೆಡೆ ಇ-ಖಾತೆ ಮಾಡಿ ಮನೆ ನಿರ್ಮಾಣ ಮಾಡಲಾಗಿದೆ. ನಗರದ ಖಾಸಗಿ ಶಾಲೆ ಬಳಿ ರಾಜಕಾಲುವೆ ಬಹುತೇಕ ಒತ್ತುವರಿ ಮಾಡಲಾಗಿದೆ.

2013 ರಲ್ಲಿ ಮಳೆಗೆ ನಗರದ ಆಶ್ರಯ-ಡಿಸಿ ಕಾಲನಿಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ, ಹಾನಿಯಾಗಿತ್ತು. ಆಗ ಎಚ್ಚೆತ್ತ ತಾಲೂಕು ಆಡಳಿತ ರಾಜಕಾಲುವೆ ನಿರ್ಮಿಸಿತ್ತು. ಆದರೆ, ರಾಜಕಾಲುವೆಯನ್ನು ಮೇಗಳಕೊಟ್ಟಿಗೆವರೆಗೆ ನಿರ್ಮಿಸಿದ್ದರಿಂದ ಪ್ರಯೋಜನವಾಗಿಲ್ಲ.

ಕಳೆದ ವರ್ಷ ಜೂ.5 ರಂದು ಸುರಿದ ಭಾರಿ ಮಳೆಗೆ ನಗರದ ಚಿಟುಗು ಮಲ್ಲೇಶ್ವರ ಬಡಾವಣೆ ಅಕ್ಷರಶಃ ಕೆರೆಯಂತಾಗಿ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು. ತಾಹಾ ಕಲ್ಯಾಣ ಮಂಟಪ, ರಾಷ್ಟ್ರೀಯ ಅಕಾಡೆಮಿ ಶಾಲೆಯ ಹಿಂಭಾಗ ಹೊಸ ಬಡಾವಣೆಗಳಲ್ಲಿ ರಾಜಕಾಲುವೆಯ ಬದಲು ಬಾಕ್ಸ್ ಚರಂಡಿ ನಿರ್ಮಿಸಿದ್ದಾರೆ.

ವಾಣಿವಿಲಾಸ ನಾಲೆಯ ಬಲ ಭಾಗದ ಬಡಾವಣೆಗಳು ಹಾಗೂ ಮೇಲ್ಭಾಗದ ಜಮೀನುಗಳ ನೀರು ಹರಿದು ಹೋಗಲು ಸೂಕ್ತ ಸ್ಥಳವಿಲ್ಲದ ಕಾರಣ ಮಳೆಯ ನೀರು ಎಲ್ಲೆಂದರಲ್ಲಿ ನುಗ್ಗಿ, ಕುವೆಂಪು ನಗರ, ಗಾಂಧಿ ಬಡಾವಣೆ, ಸಿಎಂ ಬಡಾವಣೆಗಳು ಜಲಾವೃತವಾಗಿದ್ದವು.

ಮಳೆಗಾಲ ಮುಗಿದ ನಂತರ ಸ್ವಚ್ಛಗೊಳಿಸದ ಕಾರಣ ಕಾಲುವೆ ಕಾಣದ ರೀತಿಯಲ್ಲಿ ಹೂಳು ತುಂಬಿತ್ತು. ಆಳೆತ್ತರಕ್ಕೆ ಮುಳ್ಳುಕಂಟಿ ಬೆಳೆದಿತ್ತು. ಬಿರುಸಿನ ಮಳೆಯಾದರೆ ಮನೆಗಳಿಗೆ ನುಗ್ಗಬಹುದು ಎಂದು ಅಂದಾಜು ಮಾಡಿದ ನಗರಸಭೆ ಕಾಲುವೆ ಶುಚಿಗೊಳಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ.

2013 ಹಾಗೂ 2022 ರಲ್ಲಿ ಆಗಿರುವ ಮಳೆಯ ಪ್ರಮಾಣವನ್ನು ಅಂದಾಜು ಮಾಡಿ, ಅಂತಹ ಮಳೆಯಾದರೆ ಎಷ್ಟು ಪ್ರಮಾಣದ ನೀರು ಹರಿಯಬಹುದು ಎಂಬ ಲೆಕ್ಕಾಚಾರದಲ್ಲಿ ರಾಜಕಾಲುವೆಗಳನ್ನು ವಿಸ್ತರಿಸಬೇಕು. ನಂಜುಂಡೇಶ್ವರ ಚಿತ್ರಮಂದಿರದ ಪಕ್ಕದ ರಾಜಕಾಲುವೆಯನ್ನು ಶುಚಿಗೊಳಿಸಬೇಕು. ರಾಜಕಾಲುವೆ ಮತ್ತು ಚರಂಡಿಗಳ ಒತ್ತುವರಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

ಕ್ಷೇತ್ರದ ಶಾಸಕ ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರತ್ತ ಹೆಚ್ಚು ನಿರೀಕ್ಷೆ ಹರಿದಿದೆ.

ಸರ್ವೇ ಬಳಿಕ ಕ್ರಮ: ಹಿರಿಯೂರಿನ ಜನರ ಸುರಕ್ಷತೆಗೆ ನಗರಸಭೆ ಆದ್ಯತೆ ನೀಡಿದ್ದು, ಮೊದಲ ಹಂತದಲ್ಲಿ ರಾಜಕಾಲುವೆ, ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಒತ್ತುವರಿ ತೆರವಿಗೆ ಸರ್ವೇ ಮಾಡಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಚ್.ಮಹಂತೇಶ್ ತಿಳಿಸಿದರು.

ದಿಟ್ಟ ಕ್ರಮ ಅಗತ್ಯ: ಘನಪುರಿ ಎಂದು ಕರೆಯುತ್ತಿದ್ದ ಹಿರಿಯೂರಿನಲ್ಲಿ ಎರಡು ಪ್ರಮುಖ ರಾಜಕಾಲುವೆಗಳು ಒತ್ತುವರಿಯಾಗಿದೆ. ದಶಕಗಳ ಹಿಂದೆ 15 ಅಡಿ ವಿಸ್ತೀರ್ಣದ ರಾಜಕಾಲುವೆ ಒತ್ತುವರಿಯಿಂದ ಇಂದು 2 ಅಡಿಗೆ ಇಳಿದಿದೆ. ನಗರಸಭೆ ಅಧಿಕಾರಿಗಳು- ಜನಪ್ರತಿನಿಧಿಗಳು ಒತ್ತುವರಿ ತೆರವಿಗೆ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಸದಸ್ಯ ಜಿ.ಪ್ರೇಮ್‌ಕುಮಾರ್ ಒತ್ತಾಯಿಸಿದ್ದಾರೆ.