ಸಾಗರದಲ್ಲಿ ವಿದುಷಿ ಸಂಜನಾ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಉದ್ಘಾಟಿಸಿದರು. ಡಿ.ಎಸ್.ಅರುಣ್, ಮೈತ್ರಿ ಪಾಟೀಲ್, ಗಣೇಶ ಪ್ರಸಾದ್, ಅರುಣಕುಮಾರ್ ಇತರರಿದ್ದರು. 
ನ್ಯೂಸ್

ರಂಗಮಂದಿರ ನಿರ್ಮಾಣಕ್ಕೆ ಇಚ್ಛಾಶಕ್ತಿ ಅಗತ್ಯ

ಸಾಗರ: ಸಾಗರಕ್ಕೆ ಅವಶ್ಯವಿರುವ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ಕಟ್ಟಲು 4.80 ಕೋಟಿ ರೂ. ಮಂಜೂರಾಗಿತ್ತು. ಕೇಂದ್ರ ಸರ್ಕಾರದಿಂದ 7.20 ಕೋಟಿ ರೂ. ಸೇರಿ ಒಟ್ಟು 12 ಕೋಟಿ ರೂ. ವೆಚ್ಚದ ಸುಸಜ್ಜಿತ ರಂಗಮಂದಿರ ನಿರ್ಮಾಣ ಕಾಮಗಾರಿ ಸಂಬಂಧಿಸಿ ಈಗಿನ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಸಾಗರ ನಗರಸಭೆ ರಂಗಮಂದಿರದಲ್ಲಿ ಪರಿಣಿತಿ ಕಲಾಕೇಂದ್ರದಿಂದ ವಿದುಷಿ ಎಂ.ಆರ್.ಸಂಜನಾ ಅವರ ಭರತನಾಟ್ಯ ರಂಗ ಪ್ರವೇಶ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾನು ಶಾಸಕನಾಗಿದ್ದಾಗ ಸುಸಜ್ಜಿತ ಒಳಾಂಗಣ ರಂಗಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಿ ನಮ್ಮ ಸರ್ಕಾರದಿಂದ 4.80 ಕೋಟಿ ರೂ. ಹಣ ಮಂಜೂರು ಮಾಡಿಸಿದ್ದೇನೆ. ನಂತರ ಸರ್ಕಾರ ಬದಲಾಗಿ ಯೋಜನೆ ನನೆಗುದಿಗೆ ಬಿದ್ದಿದೆ. ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣವಾದರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ ಎಂದರು.

ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ಸಾಗರ ಸಾಂಸ್ಕೃತಿಕವಾಗಿ ಅತ್ಯಂತ ವಿಶೇಷ ಸ್ಥಾನಮಾನ ಹೊಂದಿದೆ. ಭರತನಾಟ್ಯ ರಂಗ ಪ್ರವೇಶ ಕಲಾವಿದರ ಸಾರ್ಥಕದ ಕ್ಷಣ. ಪರಿಣಿತಿ ಕಲಾಕೇಂದ್ರವು ಅನೇಕ ಕಲಾವಿದರಿಗೆ ಕಲೆಯನ್ನು ಧಾರೆ ಎರೆಯುವ ಕೆಲಸ ಮಾಡಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಪ್ರಮುಖರಾದ ಟಿ.ಡಿ.ಮೇಘರಾಜ್, ಗಣೇಶ ಪ್ರಸಾದ್, ಅರುಣಕುಮಾರ್, ರಾಘವೇಂದ್ರ, ಸವಿತಾ ಇತರರಿದ್ದರು.