Facebook : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಹೆಚ್ಚಾಗುತ್ತಿದೆ. ಅಮಾಯಕ ಜನರ ದೌರ್ಬಲ್ಯವನ್ನು ತಿಳಿದುಕೊಂಡು ಜಾಲತಾಣದಲ್ಲಿ ವಂಚಿಸುವುದು ಸಾಮಾನ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮುಖವಾಡ ಧರಿಸಿರುವ ವಂಚಕರಿದ್ದು, ಸ್ವಲ್ಪ ಯಾಮಾರಿದರೂ ಹಣದ ಜತೆಗೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಹುಷಾರ್! ಜಾಲತಾಣದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಒಂದೆರೆಡು ಯೋಚಿಸುವುದು ತಂಬಾ ಒಳಿತು. ಇಲ್ಲವಾದರೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.
ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬ ತನ್ನ ಮನೆಗೆ ಊಟಕ್ಕೆ ಬಂದಿದ್ದ ಯುವತಿಗೆ ಊಟದಲ್ಲಿ ಮಾದಕ ದ್ರವ್ಯ ಬೆರೆಸಿ ಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಅದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾನೆ. ಇದೀಗ ಬೇರೆ ದಾರಿಯಿಲ್ಲದೇ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ.
ವಿವರಗಳಿಗೆ ಹೋದರೆ, ಹೈದರಾಬಾದ್ನ ಬಂಜಾರ ಹಿಲ್ಸ್ ರಸ್ತೆ ಸಂಖ್ಯೆ 7 ರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಮಹೇಂದ್ರವರ್ಧನ್ ಎಂಬ ಯುವಕ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡ. ಮಹೇಂದ್ರ ತನ್ನನ್ನು ತಾನು ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಪರಿಚಯಿಸಿಕೊಂಡ. ಇಬ್ಬರು ಪರಿಚಯ ಆಳವಾಯಿತು.
2023, ಆಗಸ್ಟ್ 15 ರಂದು ಸಂತ್ರಸ್ತ ಯುವತಿ ಮಹೇಂದ್ರನ ಮನೆಗೆ ಊಟಕ್ಕೆ ಆಗಮಿಸಿದ್ದಳು. ಈ ವೇಳೆ ಊಟದಲ್ಲಿ ಮಾದಕ ದ್ರವ್ಯವನ್ನು ಬೆರೆಸಿ, ಆಕೆಗೆ ನೀಡಿದನು. ಅದನ್ನು ಸೇವಿಸಿದ ಸಂತ್ರಸ್ತೆ ತಕ್ಷಣ ನಿದ್ರೆಗೆ ಜಾರಿದಳು. ಅದೇ ಸಮಯದಲ್ಲಿ, ಆತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು. ನಿದ್ರೆಯಿಂದ ಎಚ್ಚರಗೊಂಡಾಗ ತನ್ನ ಸ್ಥಿತಿಯನ್ನು ನೋಡಿ ಸಂತ್ರಸ್ತೆ ಆಘಾತಕ್ಕೆ ಒಳಗಾದಳು. ಈ ವೇಳೆ ಮಹೇಂದ್ರ, ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ.
ಕೆಲ ಸಮಯದಿಂದ ಫೋಟೋ ಮತ್ತು ವಿಡಿಯೋ ತೋರಿಸಿ, ಆಕೆಗೆ ಮಹೇಂದ್ರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಆಕೆ 20 ಲಕ್ಷ ರೂ.ವರೆಗೆ ಹಣ ನೀಡಿದ್ದಳು. ಆದರೆ, ಆರೋಪಿಯ ಕಿರುಕುಳ ದಿನೇ ದಿನೇ ಹೆಚ್ಚಾಯಿತು. ಹಣ ಕೊಡದಿದ್ದರೆ ಫೋಟೋ ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿ ಇತ್ತೀಚೆಗೆ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ.
ಆರೋಪಿಯ ಕಿರುಕುಳ ತಾಳಲಾರದೇ ಸಂತ್ರಸ್ತೆ, ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 64(1), 308(2), 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)