ನ್ಯೂಸ್

ತೆಲಂಗಾಣ ಸಿಎಂ ರೀತಿಯಲ್ಲಿ ಸಿದ್ದರಾಮಯ್ಯ ಛಾತಿ ತೋರಿಸುವರೆ ?‘: ಬಿ.ವೈ.ವಿಜಯೇಂದ್ರ ಪ್ರಶ್ನೆ| B.Y. Vijayendra question

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಖಜಾನೆಗೆ ಭಾರವಾಗಿವೆ. ಆರ್ಥಿಕ ಪರಿಸ್ಥಿತಿ ಅಸ್ತವ್ಯಸ್ಥಗೊಳಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಮುಚ್ಚುಮರೆಯಿಲ್ಲದೆ ಹೇಳಿದ್ದು, ಅಂತಹ ಛಾತಿ ರಾಜ್ಯದ ಸಿಎಂ ಸಿದ್ದರಾಮಯ್ಯ ತೋರಿಸುವರೆ ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ B Y Vijayendra ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರೇವಂತರೆಡ್ಡಿ ಹೇಳಿಕೆಯೊಂದಿಗೆ ಸಂದೇಶ ಹಂಚಿಕೊಂಡಿರುವ ಅವರು, ತೆಲಂಗಾಣ ಸಿಎಂ ರೀತಿಯಲ್ಲಿ ನೈಜ ಸ್ಥಿತಿಯನ್ನು ಸಿಎಂ ಸಿದ್ದರಾಮಯ್ಯ ಒಪ್ಪಿಕೊಳ್ಳಬೇಕು. ಆರ್ಥಿಕ ಪರಿಸ್ಥಿತಿ ಸುಧಾರಣೆ ಹಾಗೂ ನೈಜ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರು ಗ್ಯಾರಂಟಿ ಯೋಜನೆಗಳು ಬೊಕ್ಕಸಕ್ಕೆ ಭಾರವಾಗಿವೆ. ಆರ್ಥಿಕ ವ್ಯವಸ್ಥೆ ಹದಗೆಟ್ಟು, ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗಿದೆ ಎಂಬ ವೈಲ್ಯ, ಕಟು ವಾಸ್ತವವನ್ನು ತೆಲಂಗಾಣ ಸಿಎಂ ರೇವಂತರೆಡ್ಡಿ ಒಪ್ಪಿಕೊಂಡು, ಆಮಟ್ಟಿಗೆ ಧೈರ್ಯವಂತಿಕೆ ಮೆರೆದಿದ್ದಾರೆ.

ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ಧೋರಣೆ ಭಿನ್ನವಾಗಿದ್ದು, ಆರ್ಥಿಕ ದುಃಸ್ಥಿತಿಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಎಲ್ಲವೂ ಸರಿಯಾಗಿದೆ ಎಂಬಂತೆ ನಟಿಸುತ್ತಿದೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಮೊಸಳೆ ಕಣ್ಣೀರಿನ ಮುಖವಾಡ ಬಯಲು

ಕನ್ನಡ ಶಾಲೆಗಳು ಮುಚ್ಚುತ್ತಿವೆ, ಇರುವ ಶಾಲೆಗಳು ದೈನೇಸಿ ಪರಿಸ್ಥಿತಿಯಲ್ಲಿವೆ. 60 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಕನ್ನಡದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮುಖವಾಡ ಕಳಚಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರನಟ, ‘ಮುಖ್ಯಮಂತ್ರಿ’ ಚಂದ್ರು ಭಾಷಣದ ವಿಡಿಯೋ ತುಣುಕೊಂದನ್ನು ಬಿ.ವೈ.ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡು, ಸಿಎಂ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

ಕನ್ನಡ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಇದರಿಂದ ಕನ್ನಡತನ ಹೇಗೆ ಉಳಿಯಲು ಸಾಧ್ಯ ? ಎಂದು ಹಿರಿಯ ಕಲಾವಿದ ‘ಮುಖ್ಯಮಂತ್ರಿ’ ಚಂದ್ರು ಪ್ರಶ್ನಿಸಿದ್ದಾರೆ.

ಈ ಸರ್ಕಾರದಿಂದ ಕನ್ನಡದ ಉದ್ಧಾರ ಸಾಧ್ಯವೇ ಇಲ್ಲ. ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆಯಿಲ್ಲವೆಂಬ ವಾಸ್ತವ ಪರಿಸ್ಥಿತಿಯನ್ನು ಬಿಚ್ಚಿಡಲಾಗಿದೆ. ಕರ್ನಾಟಕವನ್ನು ಅಭಿವೃದ್ಧಿ ಶೂನ್ಯವಾಗಿಸಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ.

ಶೂನ್ಯ ಪರಿಸ್ಥಿತಿಯನ್ನು ಮುಚ್ಚಿಕೊಳ್ಳಲು ಕನ್ನಡಿಗರ ದಿಕ್ಕು ತಪ್ಪಿಸುವ ಅಸತ್ಯದ ವಿವಾದಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.