ನವದೆಹಲಿ: ಕರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಬಳಿಕ ಮಾಡಿದ ಟ್ವೀಟ್ ಕುತೂಹಲ ಹುಟ್ಟಿಸಿದೆ.
ಮಾ.24ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಅಂದು ರಾತ್ರಿ 12 ಗಂಟೆಯಿಂದಲೇ ಭಾರತ ಲಾಕ್ಡೌನ್ ಆಗಲಿದೆ ಎಂದು ಘೋಷಿಸಿದ್ದರು. ಹಾಗೇ ಮೊನ್ನೆ ಮನ್ ಕೀ ಬಾತ್ನಲ್ಲಿ ಮಾತನಾಡಿ, ಕರೊನಾ ವೈರಸ್ ಬಗ್ಗೆ ಅರಿವು ಮೂಡಿಸಿದ್ದರು.
ಅದರ ಹೊರತಾಗಿಯೂ ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನರೊಂದಿಗೆ ಸಂವಹನ ನಡೆಸುತ್ತಲೇ ಇದ್ದಾರೆ. ಕರೊನಾ ಗಂಭೀರತೆ ಅರ್ಥ ಮಾಡಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಂದೇಶ ನೀಡುತ್ತಲೇ ಇದ್ದಾರೆ.
ಹಾಗೇ ಇಂದು ಕೂಡ ಒಂದು ಟ್ವೀಟ್ ಮಾಡಿದ್ದಾರೆ. ನಾಳೆ (ಏಪ್ರಿಲ್3) ಬೆಳಗ್ಗೆ 9ಗಂಟೆಗೆ ನಾನು ದೇಶದ ಜನರಿಗೆ ವಿಡಿಯೋ ಸಂದೇಶವೊಂದನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್ ಪ್ರಮಾಣದ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 1965 ಸೋಂಕಿತರು ಇದ್ದು, 50 ಮಂದಿ ಮೃತಪಟ್ಟಿದ್ದಾರೆ.
ಲಾಕ್ಡೌನ್ ಇದ್ದರೂ ಜನರ ಓಡಾಟ ಸಂಪೂರ್ಣ ಬಂದ್ ಆಗಿಲ್ಲ. ಹಾಗಾಗಿ ಮೋದಿಯವರು ವಿಡಿಯೋ ಸಂದೇಶದಲ್ಲಿ ಏನು ಹೇಳಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ. (ಏಜೆನ್ಸೀಸ್)