ಆಂಧ್ರಪ್ರದೇಶ: ರಾಜಮೌಳಿ ನಿರ್ದೇಶನದ ಬ್ಲಾಕ್ಬಸ್ಟರ್ 'ಆರ್ಆರ್ಆರ್' ಚಿತ್ರದ ಮೂಲಕ ಇಡೀ ವಿಶ್ವಕ್ಕೆ ತಮ್ಮನ್ನು ತಮ್ಮ ಪಾತ್ರದಿಂದಲೇ ಪರಿಚಯಿಸಿಕೊಂಡ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್, ಇದೊಂದು ಸಿನಿಮಾ ಮೂಲಕವೇ ಅಪಾರ ಯಶಸ್ಸು, ಕೀರ್ತಿಯನ್ನು ಗಳಿಸಿದ್ದಾರೆ. ಇತ್ತೀಚೆಗಷ್ಟೇ ರಿಲೈಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಕ್ಕೆ ಆಗಮಿಸಿದ ನಟ ಮುಂಬೈ ಏರ್ಪೋರ್ಟ್ನಿಂದ ನೇರವಾಗಿ ಲಂಡನ್ಗೆ ಹಾರಿದ್ದಾರೆ.
'ಗೇಮ್ ಚೇಂಜರ್' ಚಿತ್ರದ ಶೂಟಿಂಗ್ನ ಒಂದು ಮುಖ್ಯಭಾಗ ಅಂತ್ಯಗೊಂಡ ಬೆನ್ನಲ್ಲೇ ಅನಂತ್-ರಾಧಿಕಾ ಮದುವೆಗಾಗಿ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಮುಂಬೈಗೆ ತೆರಳಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳನ್ನು ಹರಸಿ, ಆಶೀರ್ವದಿಸಿದ 'ಆರ್ಆರ್ಆರ್' ಸ್ಟಾರ್, ಪತ್ನಿಯ ಜತೆಗೆ ಅಲ್ಲಿಂದ ನೇರವಾಗಿ ಲಂಡನ್ಗೆ ಹಾರಿದ್ದಾರೆ. ಮೊದಲಿಗೆ ಇದು ಅವರ ಅಭಿಮಾನಿಗಳಿಗೆ ಗೊಂದಲ ಉಂಟುಮಾಡಿದರು ಬಳಿಕ ಅಸಲಿ ಕಾರಣ ಇದೇ ಇರಬಹುದು ಎಂಬ ಉತ್ತರ ಕಂಡುಕೊಂಡಿದ್ದಾರೆ.
ಮುಂದಿನ ಎರಡು ವಾರಗಳ ಕಾಲ ಲಂಡನ್ನಲ್ಲೇ ರಾಮ್ ಚರಣ್ ಕುಟುಂಬ ಉಳಿದುಕೊಳ್ಳಲಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಆದರೆ, ಈ ಮಧ್ಯೆ ರಾಮ್ ಚರಣ್ ಲಂಡನ್ಗೆ ಹೋಗಲು ಕಾರಣ, ಯುಕೆಯಲ್ಲಿ ಆಯೋಜಿಸಿರುವ ವಿಶೇಷ ಸನ್ಮಾನ ಕಾರ್ಯಕ್ರಮ ಎನ್ನಲಾಗಿದೆ. ಮೇಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂ ವತಿಯಿಂದ ಮೆಗಾಪವರ್ ಸ್ಟಾರ್ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಸದ್ಯ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).