ನವದೆಹಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಗೆ ಶಿಕ್ಷೆಗೆ ತಡೆ ನೀಡಿತ್ತು. ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮತ್ತೆ ಸಂಸದರಾಗಿ ನೇಮಕ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದರಿಂದ ಎಲ್ಲರ ಕಣ್ಣುಗಳು ಸೋಮವಾರ ಲೋಕಸಭಾ ಸಚಿವಾಲಯದ ಮೇಲೆ ನೆಟ್ಟಿವೆ.
ರಾಹುಲ್ ಗಾಂಧಿ ಅವರನ್ನು ಮತ್ತೆ ಸಂಸತ್ತಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಲೋಕಸಭಾ ಅಧಿಕಾರಿಗಳು, “ಸುಪ್ರೀಂಕೋರ್ಟ್ ಆದೇಶದ ಅಧಿಕೃತ ಪ್ರತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದೇಶವನ್ನು ಅಧ್ಯಯನ ಮಾಡಿದ ನಂತರ, ಮರು ನೇಮಕ ಮಾಡುವ ಪ್ರಕ್ರಿಯೆಯು ಸಾಮಾನ್ಯವಾಗಿ 30 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಅಂತಹ ಅಧಿಸೂಚನೆಗಳ ಪ್ರೊಫಾರ್ಮಾ ಸಚಿವಾಲಯದಲ್ಲಿ ಸುಲಭವಾಗಿ ಲಭ್ಯವಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 10:30 ಕ್ಕೆ ಪಕ್ಷದ ಸಂಸದೀಯ ಕಚೇರಿಯಲ್ಲಿ ಕಾಂಗ್ರೆಸ್ ತನ್ನ ಲೋಕಸಭಾ ಸಂಸದರ ಸಭೆಯನ್ನು ಕರೆದಿದೆ. ಅಲ್ಲಿ ಮೋದಿ ಉಪನಾಮ ಹೇಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯರಾಗಿ ಮರುಸ್ಥಾಪಿಸುವ ಬೇಡಿಕೆಯನ್ನು ಎತ್ತುವ ಸಾಧ್ಯತೆಯಿದೆ.
ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಗೆ ವಿಧಿಸಿದ್ದ ಶಿಕ್ಷೆಯನ್ನು ತಡೆಹಿಡಿದ ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಔಪಚಾರಿಕವಾಗಿ ಲೋಕಸಭಾ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಕಾಂಗ್ರೆಸ್ ಲೋಕಸಭಾ ಸಂಸದ ಅಧೀರ್ ರಂಜನ್ ಚೌಧರಿ ಶನಿವಾರ ತಿಳಿಸಿದ್ದಾರೆ. ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಜುಲೈನಲ್ಲಿ ಗುಜರಾತ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ; ದ್ವೇಷದ ವಿರುದ್ಧ ಪ್ರೀತಿಯ ಗೆಲುವು ಎಂದ ಕಾಂಗ್ರೆಸ್ ನಾಯಕರು
ಆದಾಗ್ಯೂ, ಈ ವರ್ಷದ ಆರಂಭದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ) ಸಂಸದ ಮೊಹಮ್ಮದ್ ಫೈಜಲ್ ಪ್ರಕರಣದಲ್ಲಿ ನಡೆದಂತೆ ಕಾನೂನು ಸಚಿವಾಲಯದ ಅಭಿಪ್ರಾಯವನ್ನು ಪಡೆಯಲು ಸಚಿವಾಲಯ ನಿರ್ಧರಿಸಿದರೆ ಮರುಸ್ಥಾಪನೆಯು ಸುದೀರ್ಘ ಪ್ರಕ್ರಿಯೆಯಾಗಿ ಬದಲಾಗಬಹುದು.
ಲಕ್ಷದ್ವೀಪದ ಸಂಸದರಾದ ಫೈಜಲ್ ಜನವರಿಯಲ್ಲಿ ಕೇರಳ ಹೈಕೋರ್ಟ್‍ನಿಂದ ಶಿಕ್ಷೆಗೆ ತಡೆಯಾಜ್ಞೆ ಪಡೆದಿದ್ದರು. ಆದರೆ ಅವರು ಲೋಕಸಭೆಗೆ ಮರಳಲು ಸುಮಾರು ಎರಡು ತಿಂಗಳು ಕಾಯಬೇಕಾಗಿ ಬಂದಿತ್ತು. "ಆದರೆ ಅಂತಹ ಕ್ರಮದ ಸಾಧ್ಯತೆಗಳು ಬಹಳ ಕಡಿಮೆ. ಇದು ಸುಪ್ರೀಂ ಕೋರ್ಟ್‍ನ ಆದೇಶ" ಎಂದು ಹೆಸರು ಹೇಳಲು ಇಚ್ಛಿಸದ ಲೋಕಸಭೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸದಾಗಿ ರಚನೆಯಾದ ಪ್ರತಿಪಕ್ಷಗಳ ಮೈತ್ರಿಕೂಟವಾದ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ ಅಥವಾ I.N.D.I.A ನಾಯಕರು ಸೋಮವಾರ ಸಂಸತ್ತಿನಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿ ಸದನದಲ್ಲಿ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಈ ಸಭೆ ನಡೆಯಲಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಹಿನ್ನೆಲೆ, ಕಾಂಗ್ರೆಸ್ ಕಾರ್ಯಕರ್ತರ ಮೌನ ಪ್ರತಿಭಟನೆ
I.N.D.I.A ಮತ್ತು ಕಾಂಗ್ರೆಸ್‍ನ ಎರಡೂ ಸಭೆಗಳಲ್ಲಿ ವಿರೋಧ ಪಕ್ಷದ ಸಂಸದ ರಾಹುಲ್ ಗಾಂಧಿ ಅನರ್ಹತೆಯನ್ನು ಬೇಗನೇ ಹಿಂತೆಗೆದುಕೊಳ್ಳದಿದ್ದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. "ಲೋಕಸಭಾ ಸ್ಪೀಕರ್ ಆದಷ್ಟು ಬೇಗ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾವೆಲ್ಲರೂ ನಿರೀಕ್ಷಿಸುತ್ತೇವೆ" ಎಂದು ಕಾಂಗ್ರೆಸ್‍ನ ಲೋಕಸಭಾ ಶಾಸಕ ಮಾಣಿಕಂ ಠಾಗೋರ್ ಹೇಳಿದರು. (ಏಜೆನ್ಸೀಸ್)