ನ್ಯೂಸ್

ಅವಹೇಳನ ಸಹಿಸುವುದಿಲ್ಲ: ಬಿಜೆಪಿ ಎಚ್ಚರಿಕೆ | Urge for action

ಬೆಂಗಳೂರು: ಧರ್ಮಸ್ಥಳ ಚಲೋ ಜಾಥಾದಲ್ಲಿ ತೆರಳುತ್ತಿದ್ದ ಬಿಜೆಪಿ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳ ವಿಡಿಯೋ ಸೆರೆಹಿಡಿದು ಹಾನಿಕಾರಕ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮವಹಿಸಿಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ದೂರಿದರು.

ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕ್ಷೇಪಾರ್ಹ ಸಂದೇಶ ಹಂಚಿಕೊಂಡವರ ವಿರುದ್ಧ ದಾವೆ ಹೂಡಿ ಕ್ರಮಕೈಗೊಳ್ಳುವ ಜತೆಗೆ ಸಂದೇಶವನ್ನು ತೆಗೆಯಿಸಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಯಾವುದೇ ಸಂದೇಶ ಹಂಚಿಕೆಯಾದಾಗ ಹಾನಿಕಾರಕ, ಪ್ರಚೋದಕವೆಂದು ಕೇಸ್ ಹಾಕಿ, ಬಂಧಿಸುತ್ತಾರೆ. ಆದರೆ ಬಿಜೆಪಿ ಧರ್ಮಸ್ಥಳ ಚಲೋ ಜಾಥಾಕ್ಕೆ ಅವಮಾನಿಸುವ ಜತೆಗೆ ಕಲೆಯನ್ನು ಅಗೌರವಿಸಿದ್ದರೂ ಕ್ರಮಕೈಗೊಂಡಿಲ್ಲ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಆಕ್ಷೇಪಿಸಿದರು.

ಸತ್ಯ, ನ್ಯಾಯದ ಪರ

ಧರ್ಮಸ್ಥಳ ಹಾಗೂ ಸೌಜನ್ಯ ಪ್ರಕರಣಗಳಲ್ಲಿ ಬಿಜೆಪಿ ಯಾರ ಪರವೆಂದು ಸಿಎಂ ಸಿದ್ದರಾಮಯ್ಯ ಕೇಳಿದ್ದು, ನಾವು ಸತ್ಯ ಹಾಗೂ ನ್ಯಾಯದ ಪರವಾಗಿದ್ದೇವೆ. ಅದಕ್ಕಾಗಿಯೇ ಹೋರಾಟ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹಿಂದುಗಳು, ಧಾರ್ಮಿಕ ಸ್ಥಳಗಳು, ಶ್ರದ್ಧಾ ಕೇಂದ್ರಗಳ ವಿರುದ್ಧ ಷಡ್ಯಂತ್ರ, ಕಳಂಕ ತರುವ ಪ್ರಯತ್ನದ ವಿರುದ್ಧ ಹೋರಾಡುತ್ತೇವೆ. ನಂಬಿಕೆಗೆ ಚ್ಯುತಿ, ಪುಣ್ಯಕ್ಷೇತ್ರಗಳಿಗೆ ಮಸಿ ಬಳಿಯಲು ಯಾರೇ ಪ್ರಯತ್ನಿಸಿದರೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಹಾಗೂ ಶನಿವಾರ ಏರ್ಪಡಿಸಿರುವ ಈದ್-ಮಿಲಾದ್-ಉನ್-ನಬಿ ಕಾರ್ಯಕ್ರಮದಲ್ಲಿ ವಿದೇಶದ ಧರ್ಮಗುರುಗಳು ಪಾಲ್ಗೊಂಡು ಭಾಷಣ ಮಾಡುವುದು ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆರೋಪಿಸಿದರು.

ಬಿಜೆಪಿ ನಿಯೋಗದಲ್ಲಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ, ಸಪ್ತಗಿರಿಗೌಡ ಇನ್ನಿತರರು ಇದ್ದರು.