ಕೋಲ್ಕತ: ಕಳೆದ 12 ದಿನ ನೀಡಲಾಗಿರುವ ಎಕ್ಸ್ಟ್ರಾ ಕಾರ್ಪೋರಿಯಲ್ ಮೆಂಬ್ರೆನ್ಸ್ ಆಕ್ಸಿಜನೇಷನ್ (ಇಸಿಎಂಒ)ಸಹಾಯದಿಂದ ಅತಿ ಬೊಜ್ಜುಳ್ಳ 24 ವರ್ಷದ ಯುವತಿ ಕೋವಿಡ್ -19 ರೋಗದಿಂದ ಗುಣಮುಖವಾಗಿದ್ದಾರೆ ಎಂದು ಆಕೆಗೆ ಚಿಕಿತ್ಸೆ ನೀಡಿದ ಆಸ್ಪತ್ರೆ ತಿಳಿಸಿದೆ.
ಇಸಿಎಂಒ ಸಹಾಯದಿಂದ ಕೋವಿಡ್ ರೋಗದಿಂದ ಗುಣಮುಖರಾದ ದೇಶದ ಮೊದಲ ವ್ಯಕ್ತಿ ಇವರಾಗಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.
ಎಲ್ಲ ಸಮಯದಲ್ಲೂ ವೆಂಟಿಲೇಟರ್ ಬೆಂಬಲದೊಂದಿಗೆ COVID-9 ರೋಗಿಗಳಲ್ಲಿ ಉಸಿರಾಟದ ತೊಂದರೆಯನ್ನು ಪ್ರಾಯೋಗಿಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ಹೇಳಲಾಗದು. ಅಂಥ ಪರಿಸ್ಥಿತಿಯಲ್ಲಿ ಇಸಿಎಂಒ ಕೊನೆಯ ಆಯ್ಕೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ದೇಗುಲ ಪುನರಾರಂಭಕ್ಕೆ ತಂತ್ರಿ ಆಕ್ಷೇಪ
ಕೋಲ್ಕತದ ಕಾಲಿಘಾಟ್ ಪ್ರದೇಶದ ಅಂದಾಜು 100 ಕೆಜಿ ದೇಹ ತೂಕ ಹೊಂದಿದ ಯುವತಿ ಮೇ 17 ರಂದು ತೀವ್ರ ಜ್ವರ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಧಾಕುರಿಯ ಎಎಂಆರ್ಐನಲ್ಲಿ ಆಕೆಯನ್ನು ಮೊದಲು ತುರ್ತು ವಿಭಾಗಕ್ಕೆ ಕರೆತಂದಾಗ, ಆಕೆಯಲ್ಲಿ ಆಮ್ಲಜನಕದ ಪ್ರಮಾಣ ಶೇಕಡಾ 34 ಕ್ಕೆ ಇಳಿದಿದ್ದು, ಇದರಿಂದ ಆಕೆಯ ಸ್ಥಿತಿ ಗಂಭೀರವಾಗಿತ್ತು. ಆಕೆ ಇತರ ಯಾವುದೇ ಅಸ್ವಸ್ಥತೆಯನ್ನು ಹೊಂದಿಲ್ಲವಾದರೂ, ಸ್ಥೂಲಕಾಯವೇ ಈ ಗಂಭೀರ ಸ್ಥಿತಿಗೆ ಬರಲು ಕಾರಣವಾಗಿರಬಹುದು ಎಂದು ವೈದ್ಯರು ಊಹಿಸಿದ್ದರು.
"ಮೇ 10 ರಿಂದ ಆಕೆ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಅವಳ ಜ್ವರ ಕಡಿಮೆಯಾದರೂ ಅದು ಮರುಕಳಿಸಿ ಅವಳಿಗೆ ತೀವ್ರ ಉಸಿರಾಟದ ತೊಂದರೆಯುಂಟಾಯಿತು. ಆಗ ವೆಂಟಿಲೇಷನ್ ಸಹಾಯ ನೀಡಲಾಯಿತು. ಪರಿಸ್ಥಿತಿ ಮತ್ತಷ್ಟು ಗಂಭೀರಗೊಳ್ಳುತ್ತಿದ್ದುದರಿಂದ ಮರುದಿನ ಇಸಿಎಂಒ ಸಹಾಯ ನೀಡಲಾಯಿತು. ಆಕೆ ಅಪಾಯದಿಂದ ಪಾರಾದ ನಂತರ ಇಸಿಎಂಒ ಮತ್ತು ವೆಂಟಿಲೇಟರ್ ಎರಡರಿಂದಲೂ ಆಕೆ ಹೊರಬಂದರು. ಇದು ಕೋವಿಡ್-19 ವೈದ್ಯಕೀಯ ನಿರ್ವಹಣೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಏಕೆಂದರೆ ನವದೆಹಲಿಯ ಏಮ್ಸ್ನಲ್ಲಿ ಇಬ್ಬರು ರೋಗಿಗಳು ಮತ್ತು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ರೋಗಿ ಇಸಿಎಂಒ ಬೆಂಬಲದ ಹೊರತಾಗಿಯೂ ಕೆಲವೇ ದಿನಗಳಲ್ಲಿ ವೈರಸ್‌ಗೆ ತುತ್ತಾಗಿದ್ದರು ಎಂದು ಎಎಂಆರ್ಐ ಆಸ್ಪತ್ರೆಯ ಇಸಿಎಂಒ ತಜ್ಞ ಡಾ. ಸೋಹಮ್ ಮಜುಂದಾರ್ ಹೇಳಿದರು.
" ಆದರೆ ಈ 24 ವರ್ಷದ ರೋಗಿಗೆ, ಇಸಿಎಂಒ ಬೆಂಬಲವು ಅಗತ್ಯವಾಗಿತ್ತು ಮತ್ತು ಸಾವಿನ ದವಡೆಯಿಂದ ಆಕೆಯನ್ನು ಪಾರು ಮಾಡಲು ನಮಗೆ ಇದು ಸಹಾಯ ವಾಯಿತು" ಎಂದು ಎಎಂಆರ್ಐ ಕ್ರಿಟಿಕಲ್ ಕೇರ್ ಮತ್ತು ಇಂಟರ್ನಲ್ ಮೆಡಿಸಿನ್‌ನ ಹಿರಿಯ ಸಲಹೆಗಾರ ಡಾ.ಮಹುಯಾ ಭಟ್ಟಾಚಾರ್ಯ ಹೇಳಿದರು.
ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ ಕೊರೊನಾವೈರಸ್ ಸೋಂಕಿತ ರೋಗಿಗಳ ಜೀವಕ್ಕೆ ಒಂದು ದೊಡ್ಡ ಅಪಾಯವೆಂದರೆ ಅವರ ಶ್ವಾಸಕೋಶದ ಅನಿಯಮಿತ ಕ್ರಿಯೆ, ಆ ಸಂದರ್ಭದಲ್ಲಿ, ರಕ್ತವು ಮೆದುಳಿಗೆ ಮತ್ತು ಇತರ ಪ್ರಮುಖ ಅಂಗಗಳಿಗೆ ಸಾಕಷ್ಟು ಆಮ್ಲಜನಕವನ್ನು ಪ್ರಸಾರ ಮಾಡಲು ವಿಫಲವಾಗಿರುತ್ತದೆ. ಈ ನಿಟ್ಟಿನಲ್ಲಿ ಇಸಿಎಂಒ ಯಂತ್ರಗಳು ಅವರಿಗೆ ಚಿಕಿತ್ಸೆ ನೀಡುವಲ್ಲಿ ಉಪಯುಕ್ತವಾಗಿವೆ. ಆದಾಗ್ಯೂ, ವಯಸ್ಸಾದ ಹಾಗೂ ಸಹ ಕಾಯಿಲೆ ಹೊಂದಿರುವ, ಹೃದಯದ ಕಾರ್ಯ ಏರುಪೇರಾಗಿರುವ COVID-19 ರೋಗಿಗಳಿಗೆ ಇಸಿಎಂಒ ಸಹಕಾರಿಯಲ್ಲ ಎಂದು ಅಧ್ಯಯನ ಹೇಳಿದೆ.