ನ್ಯೂಸ್

ಚನ್ನಪಟ್ಟಣ ಉಪಚುನಾವಣೆಗೆ ಡಿ.ಕೆ. ಸುರೇಶ್​ ಕ್ಯಾಂಡಿಡೇಟ್?​; ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಿಷ್ಟು

ರಾಮನಗರ: 18ನೇ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್​ 04ರಂದು ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಫಲ ನೀಡಿದ್ದು, 17+2 ಸ್ಥಾನಗಳನ್ನು ಗೆದ್ದುಕೊಂಡಿವೆ. ನಿರೀಕ್ಷಯಂತೆ ಮಂಡ್ಯದಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರ್​ಸ್ವಾಮಿ ಭರ್ಜರಿ ಜಯ ಗಳಿಸಿದ್ದು, ರಾಜ್ಯ ರಾಜಕಾರಣದಿಂದ ಕೇಂದ್ರದ ಕಡೆ ಮುಖ ಮಾಡಿದ್ದಾರೆ. ಚನ್ನಪಟ್ಟಣ್ಣ ಕ್ಷೇತ್ರದ ಶಾಸಕರಾಗಿದ್ದ ಅವರು ಇದೀಗ ಸಂಸದರಾಗಿ ಆಯ್ಕೆಯಾಗಿದ್ದು, ಎಂಎಲ್​ಎ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಚನ್ನಪಟ್ಟಣ್ಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಇದಾದ ಬಳಿಕ ಅವರ ಕ್ಷೇತ್ರದಲ್ಲಿ ಯಾರು ಸ್ಪರ್ಧೆಗಿಳಿಯುತ್ತಾರೆ ಎಂಬ ಕುತೂಹಲ ಶುರುವಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲುಂಡ ಡಿ.ಕೆ. ಸುರೇಶ್​ ಚನ್ನಪಟ್ಟಣ್ಣದ ಕಾಂಗ್ರೆಸ್​ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಮಾಗಡಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಚ್​.ಸಿ. ಬಾಲಕೃಷ್ಣ, ಚನ್ನಪಟ್ಟಣ್ಣದಲ್ಲಿ ಡಿ.ಕೆ. ಸುರೇಶ್​ ಸ್ಫರ್ಧೆ ಮಾಡುವ ವಿಚಾರ ಹೈಕಮಾಂಡ್​ ನಿರ್ಧಾರಕ್ಕೆ ಬಿಟ್ಟಿದ್ದು. ಈ ಉಪಚುನಾವಣೆಯಲ್ಲಿ ಚನ್ನಪಟ್ಟಣ್ಣ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲಲಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿ ಯಾರೂ ಇಲ್ಲದೆ 80 ಸಾವಿರ ಮತಗಳನ್ನು ಪಡೆದಿದ್ದೇವೆ. ಗೆಲುವಿಗೆ ಬೇಕಾಗಿರುವುದೇ ಇನ್ನು 20 ಸಾವಿರ ಮತಗಳು ಅಷ್ಟೇ, ಈ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ನಡೆಯಲ್ಲ,  ಕಾರ್ಯಕರ್ತರೂ ಕೂಡ ಮೈತ್ರಿ ಒಪ್ಪಲ್ಲ.

ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಈಗ ನಮ್ಮ ಜಿಲ್ಲೆಯಲ್ಲಿಲ್ಲ, ಮಂಡ್ಯಕ್ಕೆ ಹೋಗಾಯಿತು. ಇನ್ನು ಚನ್ನಪಟ್ಟಣ, ರಾಮನಗರಕ್ಕೆ ಬರುವ ವಿಚಾರವಿಲ್ಲ. ಇನ್ನೇನಿದ್ದರೂ ಮಂಡ್ಯ, ಹಾಸನ ನೋಡಿಕೊಂಡು ಇರುತ್ತಾರೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಚ್​.ಸಿ. ಬಾಲಕೃಷ್ಣ ಹೇಳಿದ್ದಾರೆ.