ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲು ಮಾರ್ಗಸೂಚಿ ಹಾಗೂ ಸೆಮಿಸ್ಟರ್ಗಳ ಪರೀಕ್ಷಾ ದಿನಾಂಕವನ್ನು ತಾಂತ್ರಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
2019-20ರ ಸಾಲಿನ 6ನೇ ಸೆಮಿಸ್ಟರ್ ಡಿಪ್ಲೊಮಾ ಪರೀಕ್ಷೆ ಮತ್ತು ಎಲ್ಲ ಸೆಮಿಸ್ಟರ್ ಬ್ಯಾಕ್ಲಾಗ್ ಪರೀಕ್ಷೆಗಳನ್ನು ಸೆ.7ರಿಂದ 28ರ ಅವಧಿಯಲ್ಲಿ ಹಾಗೂ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು 3 ಮತ್ತು 5ನೇ ಸೆಮಿಸ್ಟರ್ ತೇರ್ಗಡೆ ಮಾಡಲು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿ ವಿಷಯ ಬಾಕಿ ಉಳಿಸಿಕೊಂಡಿದ್ದರೆ ಮತ್ತೆ ಪರೀಕ್ಷೆ ಬರೆಯಬೇಕು. ತೇರ್ಗಡೆ ಮಾಡಬೇಕಾದರೆ ಅ ವಿದ್ಯಾರ್ಥಿ ಕಳೆದ ಸೆಮಿಸ್ಟರ್ಲ್ಲಿ ಪಡೆದಿರುವ ಅಂಕಗಳಲ್ಲಿ ಶೇ.50 ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಯು ಹಿಂದಿನ ಸೆಮಿಸ್ಟರ್ನಲ್ಲಿ ಕೆಲ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೂ ತೇರ್ಗಡೆಯಾಗಿರುವ ವಿಷಯ ಮಾತ್ರ ಪರಿಗಣಿಸಿ ಸರಾಸರಿ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಅಂಕಗಳನ್ನು ನಿಗದಿಪಡಿಸಿ ಮುಂದಿನ ಸೆಮಿಸ್ಟರ್ಗೆ ತೇರ್ಗಡೆ ಮಾಡಲಾಗುತ್ತದೆ.
ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬೇರೆ ರೀತಿಯಲ್ಲಿ ಅಂಕಗಳ ನಿರ್ಧಾರ ಮಾಡಲಾಗಿದೆ. 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಸಿ ಆಂತರಿಕ ಮೌಲ್ಯಾಂಕನ ಪಡೆಯಲು ಇಲಾಖೆ ತೀರ್ವನಿಸಿದೆ.