ನ್ಯೂಸ್

ಅಮರೀಂದರ್​ ಸಿಂಗ್​ ಬಿಜೆಪಿ ಸೇರುತ್ತಾರಾ? ತಮ್ಮ ಮುಂದಿನ ನಡೆಯ ಬಗ್ಗೆ ಕ್ಯಾಪ್ಟನ್​ ಹೇಳಿದ್ದಿಷ್ಟು

ನವದೆಹಲಿ: ಪಂಜಾಬ್​ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್ ಸಿಂಗ್​ ಅವರ ಮುಂದಿನ ರಾಜಕೀಯ ಹೆಜ್ಜೆ ಏನಾಗಬಹುದೆಂಬ ಕಾತರ ಎಲ್ಲರಲ್ಲೂ ಮೂಡಿದೆ. ಹೀಗಿರುವಾಗ, ತಾವು ಬಿಜೆಪಿ ಸೇರುವುದಿಲ್ಲ, ಆದರೆ ಕಾಂಗ್ರೆಸ್​ನಲ್ಲೂ ಉಳಿಯುವುದಿಲ್ಲ ಎಂದು ಗೊಂದಲಮಯ ಹೇಳಿಕೆಯನ್ನು ಅವರು ನೀಡಿದ್ದಾರೆಂದು ವರದಿಗಳು ತಿಳಿಸಿವೆ.​

ಬಿಜೆಪಿ ವರಿಷ್ಠ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಷಾರನ್ನು ಭೇಟಿಯಾದ ಮಾರನೇ ದಿನವಾದ ಇಂದು ಸಿಂಗ್ ಸಂದರ್ಶನವೊಂದರಲ್ಲಿ ನಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದಾರೆ. "ಈವರೆಗೂ, ನಾನು ಕಾಂಗ್ರೆಸ್​ನಲ್ಲಿದ್ದೇನೆ. ಆದರೆ ಕಾಂಗ್ರೆಸ್​ನಲ್ಲಿ ಉಳಿಯುವುದಿಲ್ಲ. ನನ್ನನ್ನು ಈ ರೀತಿ ನಡೆಸಿಕೊಳ್ಳಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ನಿನ್ನೆ ಅಮಿತ್​ ಷಾ ಅವರೊಂದಿಗೆ 45 ನಿಮಿಷಗಳ ಮೀಟಿಂಗ್​ ನಡೆಸಿದ್ದ ಬಳಿಕ ರೈತರ ಹೋರಾಟದ ಬಗ್ಗೆ ಚರ್ಚಿಸಿದ್ದಾಗಿ ಟ್ವಿಟರ್​ ಮೂಲಕ ತಿಳಿಸಿದ್ದ ಕ್ಯಾಪ್ಟನ್, ಬಿಜೆಪಿ ಸೇರಬಹುದೆಂಬ ಊಹೆಗಳಿಗೆ ಎಡೆಮಾಡಿಕೊಟ್ಟಿದ್ದರು. ಕಾಂಗ್ರೆಸ್​ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಿಂಗ್​, ಜಿ-23 ಕಾಂಗ್ರೆಸ್​ ನಾಯಕರನ್ನೂ ಭೇಟಿ ಮಾಡಿ, ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್)