ಡಿಸೆಂಬರ್ 16ರೊಳಗೆ ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳುತ್ತೇವೆ ಎಂದ ಅರ್ಜುನ್ ಸಿಂಗ್ 
ನ್ಯೂಸ್

ಡಿಸೆಂಬರ್ 16ರೊಳಗೆ ಬಾಂಗ್ಲಾ ವಶ? ಹಿಂದೂಗಳ ಹತ್ಯೆಗೆ ಪ್ರತೀಕಾರ ಎಂದ ಅರ್ಜುನ್ ಸಿಂಗ್ | Arjun Singh

Arjun Singh: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಸಚಿವ ಅರ್ಜುನ್ ಸಿಂಗ್, ಡಿಸೆಂಬರ್ 16ರೊಳಗೆ ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಭಟ್ಪಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶದ ವಿಚಾರದಲ್ಲಿ ಇನ್ನು ಯಾವುದೇ ನೆಪಗಳನ್ನು ಸಹಿಸುವುದಿಲ್ಲ. ಹಿಂದೂಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದೇ ವೇಳೆ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್, ಮಾಜಿ ಪ್ರಧಾನಿ ಹಾಗೂ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ದೇಶಕ್ಕೆ ಮರಳಿದರೆ ಅವರನ್ನು ಬಂಧಿಸಿ, ಕೈಕೋಳ ಹಾಕಿ ಕಠಿಣ ನಿಗಾದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.

ಢಾಕಾದ ವಿದೇಶಾಂಗ ಸಚಿವಾಲಯದಲ್ಲಿ ವಿದೇಶಿ ರಾಜತಾಂತ್ರಿಕರಿಗೆ ಮಾಹಿತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಬೀರ್, ಹಸೀನಾ ಡಿಸೆಂಬರ್ 16ರಂದು ಭಾರತದಿಂದ ಬಾಂಗ್ಲಾದೇಶಕ್ಕೆ ಮರಳುವ ಯೋಜನೆ ಹೊಂದಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿದ್ದಾರೆ. ಆಸೆ ಮತ್ತು ವಾಸ್ತವ ಎರಡೂ ಬೇರೆ ಎಂದು ಹೇಳಿದ್ದಾರೆ.

ಹಸೀನಾ ಅವರನ್ನು ಸಾಮಾನ್ಯ ಪ್ರಯಾಣಿಕರಂತೆ ಮರಳಲು ಅವಕಾಶ ನೀಡುವುದಿಲ್ಲ, ಹಸ್ತಾಂತರ ಪ್ರಕ್ರಿಯೆಯ ಮೂಲಕವೇ ಕರೆತರಲಾಗುವುದು ಎಂದು ಬಾಂಗ್ಲಾದೇಶದ ದಿ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಇದಕ್ಕೆ ವಿರುದ್ಧವಾಗಿ, ಡಿಸೆಂಬರ್ 16ರಂದು ದೆಹಲಿಯಿಂದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನದ ಮೂಲಕ ಢಾಕಾಗೆ ಮರಳಲು ಹಸೀನಾ ಉದ್ದೇಶಿಸಿದ್ದಾರೆ ಎಂದು ಅವರ ವಕ್ತಾರ ಸಯ್ಯದ್ ಮೊಜಮ್ಮಲ್ ಅಲಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಮರಳಿದರೆ ಹಸೀನಾ ಬಂಧನ ಹಾಗೂ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸಚಿವರೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಅವರಿಗಾಗಿ ಭಾರತದಿಂದ ವಿಮಾನ ಕಳುಹಿಸುವ ಕುರಿತು ಅಧಿಕೃತ ಮಾತುಕತೆ ನಡೆದಿಲ್ಲ. 2009ರಿಂದ 2024ರವರೆಗೆ ಪ್ರಧಾನಿಯಾಗಿದ್ದ ಹಸೀನಾ, ಮೀಸಲಾತಿ ವಿರೋಧಿ ವಿದ್ಯಾರ್ಥಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿದ್ದರು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಣ್ಣೆದುರೇ ಸುಟ್ಟು ಭಸ್ಮವಾದ ಮನೆಗಳು: ಸಿಲಿಂಡರ್ ಸ್ಫೋಟದ ಶಂಕೆ | Uttarakhand Fire

ಪ್ರತಿಭಟನಾಕಾರರ ಮೇಲಿನ ದಮನಕ್ಕೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಲ್ಲಿ ಬಾಂಗ್ಲಾದೇಶದ ನ್ಯಾಯಮಂಡಳಿ ಹಸೀನಾ ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿದೆ. ಈ ಆರೋಪಗಳನ್ನು ಅವರು ನಿರಾಕರಿಸಿದ್ದು, ದೇಶಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಯುಕೆಯಲ್ಲಿರುವ ಕಾನೂನು ಪ್ರತಿನಿಧಿಗಳ ಮೂಲಕ ಹೊಸ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದು, ಹಸ್ತಾಂತರಿಸುವಂತೆ ಢಾಕಾ ಮಾಡಿದ ಮನವಿಯನ್ನು ಭಾರತ ಪರಿಶೀಲಿಸುತ್ತಿದೆ.