ನ್ಯೂಸ್

ವನ್ಯಜೀವಿ ಕಳ್ಳಸಾಗಣೆ ಪ್ರಯಾಣಿಕನ ಬಂಧನ

ಮಂಜುನಾಥ.ಕೆ

ಬೆಂಗಳೂರು: ವನ್ಯಜೀವಿಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಎರಡು ಟ್ರಾಲಿ ಬ್ಯಾಗ್‌ಗಳಲ್ಲಿ ತರಲಾಗಿದ್ದ ಅಳಿವಿನ ಅಂಚಿನಲ್ಲಿರುವ ಹಾಗೂ ಅಪರೂಪದ ಹೆಬ್ಬಾವು ಮರಿ, ಊಸರವಳ್ಳಿ, ಆಮೆಗಳು, ಮರಿ ಕಾಂಗರೂ ಸೇರಿ ೨೩೪ ವನ್ಯಜೀವಿಗಳನ್ನು ರಕ್ಷಿಸಿದ್ದಾರೆ. ಸೋಮವಾರ ರಾತ್ರಿ ೧೦.೩೦ಕ್ಕೆ ಬ್ಯಾಂಕಾಕ್‌ನಿಂದ ಎಫ್.ಡಿ-೧೩೭ ಸಂಖ್ಯೆ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಈ ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರ್ಗಮನ ದ್ವಾರದ ಬಳಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವಾಗ, ಪ್ರಯಾಣಿಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಈ ವೇಳೆ ಆತನನ್ನು ವಶಕ್ಕೆ ಪಡೆದು ಆತನ ಟ್ರಾಲಿ ಬ್ಯಾಗ್ ಪರಿಶೀಲಿಸಿದಾಗ ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಬಳಿಕ ಆತನನ್ನು ಬಂಧಿಸಲಾಗಿದೆ. ಇದೇ ವಿಮಾನದಲ್ಲಿ ವಾರಸುದಾರರು ಇಲ್ಲದ ಮತ್ತೊಂದು ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿಯೂ ವನ್ಯಜೀವಿಗಳು ಇರುವುದು ಕಂಡು ಬಂದಿದೆ. ಈ ಸಂಬಂಧ ವನ್ಯಜೀವಿಗಳ ಕಳ್ಳ ಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಕಸ್ಟಮ್ಸ್ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.