ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ನಡೆದ ವನ್ಯಜೀವಿ ಮಂಡಳಿ ಸಭೆಯು ಪ್ರಾಥಮಿಕ ಚರ್ಚೆಗೆ ಸೀಮಿತವಾಗಿ ಆರು ನಿಮಿಷಗಳಲ್ಲೇ ಮುಗಿಯಿತು !. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಂಜೆ ನಿಗದಿಯಾಗಿದ್ದ ಮಂಡಳಿ ಸಭೆಯು ಕೊನೇ ಗಳಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಶಕ್ತಿ ಭವನಕ್ಕೆ ಸ್ಥಳಾಂತರವಾಯಿತು.
ಪರಿಚಯಾತ್ಮಕ ಸಭೆಯಿದು ಎಂದು ಸಿದ್ದರಾಮಯ್ಯ ಪೀಠಿಕೆ ಹಾಕಿದರು. ಸಭೆ ಕಾರ್ಯಸೂಚಿ ಪಟ್ಟಿ ಮೇಲೆ ಕಣ್ಣಾಡಿಸಲಿಲ್ಲ, ಮುಂದಿನ ಸಭೆಯಲ್ಲಿ ವಿಷಯವಾರು ಚರ್ಚೆಯ ಇಂಗಿತ ವ್ಯಕ್ತಪಡಿಸಿದರು.
ಕಾರ್ಯಸೂಚಿ ಪಟ್ಟಿ ಸಿದ್ಧಪಡಿಸುವ ಮುನ್ನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜತೆಗೆ ಚರ್ಚಿಸಿಯೇ ಅಂತಿಮಗೊಳಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಿಣ ಪ್ರದೇಶವೆಂದು ೋಷಣೆ, ಕಳಸಾ- ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಪರಿಸರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ತೀರುವಳಿ (ಕ್ಲಿಯರೆನ್ಸ್) ಪಡೆಯುವುದು ಸೇರಿ 33 ವಿಷಯಗಳು ಕಾರ್ಯಸೂಚಿ ಪಟ್ಟಿಯಲ್ಲಿದ್ದವು ಎಂದು ಮೂಲಗಳು ತಿಳಿಸಿವೆ.