ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ತಂದೆ-ಮಗನ ಮೇಲೆ ಕಾಡಾನೆ ದಾಳಿ 
ನ್ಯೂಸ್

ಸಿಲಿಗುರಿಯಲ್ಲಿ ತಂದೆ-ಮಗನ ಮೇಲೆ ಕಾಡಾನೆ ದಾಳಿ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ! | Elephant Attack

Siliguri Elephant Attack: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಾಡಾನೆಯೊಂದು ತಂದೆ ಮತ್ತು ಮೂರು ವರ್ಷದ ಮಗನ ಮೇಲೆ ದಾಳಿ ಮಾಡಿರುವ ಘಟನೆ ಆತಂಕ ಮೂಡಿಸಿದೆ. ಮಿಲನ್ ಮೋರ್ ಪ್ರದೇಶದ ಕರೈಬಾರಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ದಾಳಿಯ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದಾಳಿಯಲ್ಲಿ ಗಾಯಗೊಂಡವರನ್ನು ಅಸ್ಸಾಂನ ಗುವಾಹಟಿಯ ನಿವಾಸಿ ನಿರಂಜನ್ ದೇಕಾ (42) ಮತ್ತು ಅವರ ಮೂರು ವರ್ಷದ ಮಗ ಇವಾನ್ ದೇಕಾ ಎಂದು ಗುರುತಿಸಲಾಗಿದೆ. ಇಬ್ಬರೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಿಲನ್ ಮೋರ್ ಪ್ರದೇಶಕ್ಕೆ ಬಂದಿದ್ದರು ಎನ್ನಲಾಗಿದೆ.

ಏಕಾಏಕಿ ಎದುರಾದ ಕಾಡಾನೆ

ವರದಿಗಳ ಪ್ರಕಾರ, ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ಬಳಿಕ ನಿರಂಜನ್ ಅವರು ಮಗನೊಂದಿಗೆ ಮನೆಗೆ ಮರಳುತ್ತಿದ್ದರು. ಈ ವೇಳೆ ಕರೈಬಾರಿ ಪ್ರದೇಶದಲ್ಲಿ ಏಕಾಏಕಿ ಕಾಡಾನೆಯೊಂದು ಎದುರಾಗಿದ್ದು, ತಂದೆ-ಮಗನ ಮೇಲೆ ದಾಳಿ ಮಾಡಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇದೇ ವೇಳೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೂ ಆನೆ ಹಾನಿ ಮಾಡಿದೆ ಎಂದು ವರದಿಯಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಗಾಯಗೊಂಡ ತಂದೆ ಮತ್ತು ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕಪ್ಪು ಎಮ್ಮೆ, ತಿನ್ನೋದು ಹಸಿರು ಹುಲ್ಲು.. ಆದ್ರೆ ಹಾಲು ಮಾತ್ರ ಅಪ್ಪಟ ಬಿಳಿ ಯಾಕೆ? ಇಲ್ಲಿದೆ ಅಚ್ಚರಿಯ ಸೈನ್ಸ್! | Buffalo milk

ಜನವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಕಾಡಾನೆಗಳು

ಸಿಲಿಗುರಿ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಬರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜನರ ಸುರಕ್ಷತೆಗಾಗಿ ಆನೆಗಳ ಚಲನವಲನದ ಮೇಲೆ ಹೆಚ್ಚಿನ ನಿಗಾ ಇಡಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.