ಅರಬಗೆರೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೈಪಂಪ್ ಹಾನಿಯಾಗಿರುವುದು.  
ನ್ಯೂಸ್

ಕಾಡಾನೆ ದಾಳಿಗೆ ಕೈಪಂಪ್, ತೊಂಬೆ ಪೈಪ್‌ಗೆ ಹಾನಿ

ಎಂ.ರವಿ

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಬಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಡಾನೆಯೊಂದು ದಾಳಿ ನಡೆಸಿ ಕೈಪಂಪ್ ಹಾಗೂ ಕುಡಿಯುವ ನೀರಿನ ತೊಂಬೆಯ ಪೈಪ್‌ಗಳನ್ನು ಹಾನಿಗೊಳಿಸಿದೆ.

ಗ್ರಾಮದ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ತೊಂಬೆ ಹಾಗೂ ಕೈಪಂಪ್ ಇದೆ. ಇಲ್ಲಿಗೆ ಸಮೀಪದ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಯೊಂದು ಕುಡಿಯುವ ನೀರಿಗಾಗಿ ಕೈಪಂಪ್ ಅನ್ನು ತುಳಿದಿದ್ದು, ತೊಂಬೆಗೆ ನೀರು ಸರಬರಾಗುವ ಪೈಪ್‌ಗಳನ್ನು ಕಿತ್ತು ಹಾಕಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹಾನಿಗೊಳಿಸಿರುವ ತೊಂಬೆಯ ಪೈಪ್ ಹಾಗೂ ಕೈಪಂಪ್‌ಅನ್ನು ರಿಪೇರಿ ಪಡಿಸುವುದರ ಜತೆಗೆ ಕಾಡಾನೆಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.